ಮೈಸೂರು: ಸರ್ಕಾರದ ಗೊಂದಲದ ಸುತ್ತೋಲೆಗಳಿಂದ ನಾವು ಹೋಟಲ್ ಉದ್ಯಮ ನಡೆಸಲಾಗುತ್ತಿಲ್ಲ. ಆದ್ದರಿಂದ ನಾವು ರಾಜ್ಯ ಸರ್ಕಾರಕ್ಕೆ ಕಟ್ಟಿರುವ ತೆರಿಗೆ ಹಣವನ್ನು ಅರ್ಧ ವಾಪಸ್ ಕೊಡಬೇಕು ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಆಗ್ರಹಿಸಿದ್ದಾರೆ.
'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಒಬ್ಬೊಬ್ಬರು ಒಂದೊಂದು ಸುತ್ತೋಲೆ ಹೊರಡಿಸುತ್ತಾರೆ. ಮೊದಲೇ ವ್ಯಾಪಾರದಲ್ಲಿ ಸಂಕಷ್ಟ ಅನುಭವಿಸುತ್ತಿದ್ದೇವೆ. ಏಕಾಏಕಿ ಹೋಟೆಲ್ಗಳಿಗೆ ಪಾರ್ಸಲ್ ವ್ಯವಸ್ಥೆ ಮಾಡಿರುವುದರಿಂದ ಉದ್ಯಮ ನಡೆಸುವುದು ಕಷ್ಟವಾಗಿದೆ. ಸರ್ಕಾರದ ಆದೇಶಗಳಿಂದ ನಾವು ಗೊಂದಲಕ್ಕೀಡಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಿನ್ನೆ ಬೆಳಗ್ಗೆ ಇದ್ದಕ್ಕಿದ್ದಂತೆ ಅಗತ್ಯ ವಸ್ತುಗಳ ಅಂಗಡಿ ಬಿಟ್ಟು ಉಳಿದೆಲ್ಲ ಅಂಗಡಿಗಳನ್ನು ಕ್ಲೋಸ್ ಮಾಡಿಸಿದ್ದಾರೆ. ವಾಣಿಜ್ಯ ಮಳಿಗೆಗಳು ಬಂದ್ ಆದರೆ, ಹೋಟೆಲ್ಗಳಿಗೆ ಜನ ಬರುವುದಿಲ್ಲ. ಹೋಟೆಲ್ಗಳಿಗೆ ಶೇ. 50ರಷ್ಟು ಜನ ಹೋಗುಬಹುದು ಎಂದು ಎರಡು ದಿನಗಳ ಹಿಂದೆ ಆದೇಶ ಮಾಡಲಾಗಿತ್ತು. ಆದರೆ ಇಂದಿನಿಂದ ಪಾರ್ಸಲ್ಗೆ ಮಾತ್ರ ಅವಕಾಶ ಅಂತಿದ್ದಾರೆ. ಇದರಿಂದ ಹೋಟೆಲ್ ಉದ್ಯಮಕ್ಕೆ ಬಹಳಷ್ಟು ಹೊಡೆತ ಬೀಳಲಿದೆ ಎಂದರು.
ಹೋಟೆಲ್ಗಳಿಗೆ ಶೇ. 50ರಷ್ಟು ಜನ ಹೋಗುಬಹುದು ಎಂಬ ನಿಯಮ ಮತ್ತೆ ಮಾಡಿ. ಇಲ್ಲವಾದರೆ ನಾವು ಸರ್ಕಾರಕ್ಕೆ ಕಟ್ಟಿರುವ ವಿವಿಧ ತೆರಿಗೆಯ ಹಣದಲ್ಲಿ ನಮಗೆ ಅರ್ಧ ಕೊಡಿ. ಇದರಿಂದ ನಮ್ಮ ಕಾರ್ಮಿಕರಿಗೆ ಸಂಬಳ ಕೊಡಲು ಅನುಕೂಲವಾಗುತ್ತದೆ. ಸರ್ಕಾರದ ಕೆಲಸದಲ್ಲಿ ಇರುವವರಿಗೆ ಮನೆಯಲ್ಲೇ ಕೂರಿಸಿ ಸಂಬಳ ಕೊಟ್ರಲ್ಲ ಹಾಗೇ ನಮಗೂ ವ್ಯವಸ್ಥೆ ಮಾಡಿ ಎಂದು ನೋವನ್ನು ಹೊರಹಾಕಿದರು.