ಮೈಸೂರು: ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯಬೇಡಿ ಎಂದು ಮುಖ್ಯಮಂತ್ರಿಗಳಿಗೆ ಮಾಜಿ ಶಿಕ್ಷಣ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್ ಪತ್ರ ಬರೆದು ಆಗ್ರಹಿಸಿದ್ದಾರೆ.
ಈ ಕುರಿತಂತೆ 'ಈಟಿವಿ ಭಾರತ'ದೊಂದಿಗೆ ಮಾತನಾಡಿ, ಟಿಪ್ಪು ಇತಿಹಾಸವನ್ನು ತೆಗೆಯಲು ಹೊರಟಿರುವುದು ಸರಿಯಲ್ಲ. ಟಿಪ್ಪು ಇತಿಹಾಸ ಇಲ್ಲದೆ ಮೈಸೂರು ಇತಿಹಾಸ ಬೋಧಿಸಲು ಸಾಧ್ಯವಿಲ್ಲ. ಆದ್ದರಿಂದ 7,8 ಮತ್ತು 10ನೇ ತರಗತಿಗಳಿಗೆ ಮೈಸೂರು ಇತಿಹಾಸವನ್ನು ಬೋಧನೆ ಮಾಡಲು ಟಿಪ್ಪು ಇತಿಹಾಸ ಇರಲೇಬೇಕು ಎಂದು ಆಗ್ರಹಿಸಿದ್ದಾರೆ.
ಕೊರೊನಾ ಹಿನ್ನೆಲೆಯಲ್ಲಿ ಪಠ್ಯಕ್ರಮಗಳನ್ನು ಕಡಿಮೆ ಮಾಡುವಾಗ ಇತಿಹಾಸದಲ್ಲಿ ಟಿಪ್ಪು ಪಠ್ಯ ತೆಗೆದುಹಾಕಲು ಸರ್ಕಾರ ಮುಂದಾಗಿದೆ. ಈ ನಿರ್ಧಾರ ಕೈಬಿಡಬೇಕೆಂದು ಮುಖ್ಯಮಂತ್ರಿಗೆ, ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ಈ ಸಂದರ್ಭದಲ್ಲಿ ತಿಳಿಸಿದರು.