ಮೈಸೂರು: ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದು ಅರ್ಧ ಊಟ ಮಾಡಿ ಎಂದು ಹೇಳಲು ಸಾಧ್ಯವೇ ? ಕಷ್ಟವೋ ಸುಖವೋ ಆದರೆ, ಈ ವರ್ಷ ಮೈಸೂರಿನಲ್ಲಿ ದಸರಾ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸೋಣ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ ಸಿ ಮಹಾದೇವಪ್ಪ ಹೇಳಿದ್ದಾರೆ. ಈ ಮೂಲಕ ಅವರು ಅದ್ದೂರಿಯಾಗಿ ದಸರಾ ಆಚರಣೆಯ ಸುಳಿವು ನೀಡಿದ್ದಾರೆ.
ಇಂದು ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಕೃಷಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಿತ್ತನೆ ಬೀಜ ವಿತರಣೆ ಬಗ್ಗೆ ಮಾಹಿತಿ ಪಡೆದ ಸಚಿವರು, ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಈ ಬಾರಿ ನಾಡಹಬ್ಬ ದಸರಾವನ್ನು ಆಚರಣೆ ಮಾಡುವ ಬಗ್ಗೆ ದಸರಾ ಉನ್ನತ ಮಟ್ಟದ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು. ಹಿಂದಿನ ವರ್ಷ ಕೋವಿಡ್ ನಿಂದ ಜನ ತತ್ತರಿಸಿಹೋಗಿದ್ದರು. ಈ ವರ್ಷ ಎಲ್ಲವೂ ಸುಭೀಕ್ಷವಾಗಿ ನಡೆಯತ್ತಿದೆ. ಹೊಸ ಸರ್ಕಾರ ಬಂದಿದೆ, ಉತ್ತಮವಾಗಿ ಮಳೆಯಾಗುತ್ತಿದೆ. ಎಲ್ಲರೂ ಸಂತಸದಿಂದ ಉತ್ತಮವಾಗಿ ದಸರಾ ಆಚರಣೆ ಮಾಡೋಣ ಎಂದು ತಿಳಿಸಿದರು.
ಸಿಎಂ ನೇತೃತ್ವದಲ್ಲಿ ದಸರಾ ಆಚರಣೆ ಸಭೆ: ಬೆಂಗಳೂರಿನಲ್ಲಿ ಜುಲೈ 31 ರಂದು ಸಿಎಂ ನೇತೃತ್ವದಲ್ಲಿ ದಸರಾ ಆಚರಣೆ ಕುರಿತಾಗಿ ಉನ್ನತ ಮಟ್ಟದ ಸಭೆ ನಡೆಯಲಿದ್ದು. ಈ ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಹಾಗೂ ಸಂಬಂಧ ಪಟ್ಟ ಇಲಾಖೆ ಮುಖ್ಯಸ್ಥರು ಭಾಗವಹಿಸುವಂತೆ ಸೂಚಿಸಲಾಗಿದೆ. ಈ ಸಭೆಯಲ್ಲಿ, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ನಾಡಹಬ್ಬ ದಸರಾವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದು, ಇದಕ್ಕೆ ಸಂಬಂಧಿಸಿದ ರೂಪುರೇಷೆಗಳನ್ನು ಚರ್ಚಿಸಲಾಗುವುದು.
ಅಂದು ಗಜ ಪಯಣ, ನಾಡಹಬ್ಬ ದಸರಾದಲ್ಲಿ ಸ್ಥಬ್ಧಚಿತ್ರಗಳ ಆಯ್ಕೆ ಸೇರಿದಂತೆ ಪ್ರಮುಖ ವಿಚಾರಗಳನ್ನು ಚರ್ಚಿಸಲಾಗುವುದು. ಈ ಬಾರಿ ದಸರಾದಲ್ಲಿ ಮೈಸೂರಿನ ಸಂಸ್ಕೃತಿ, ಮಹಾರಾಜರ ಪರಂಪರೆ ವೈಭವ ಎಲ್ಲವನ್ನೂ ಉಳಿಸಿಕೊಂಡು ದಸರಾ ಆಚರಣೆ ಮಾಡೋಣ ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲಿ ಸಾಧಾರಣ ಮಳೆ : ಈ ಬಾರಿ ಮೈಸೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಸಾಧಾರಣ ಮಳೆಯಾಗಿದೆ. ಜೂನ್ 1 ರಿಂದ ಜುಲೈ 27 ರ ವರೆಗೆ ವಾಡಿಕೆಯ ಮಳೆ 202.1 ಮಿಲಿ ಮೀಟರ್ ಮಳೆ ಆಗಬೇಕಿತ್ತು. ಆದರೆ, 166.5 ಮಿಲಿ ಮೀಟರ್ ಮಳೆಯಾಗಿದೆ. ಮಳೆ ಕೊರತೆ 36 ಮಿಲಿ ಮೀಟರ್ ನಷ್ಟು ಪ್ರಮಾಣದ ಮಳೆ ಕಡಿಮೆಯಾಗಿದೆ ಎಂದು ಉಸ್ತುವಾರಿ ಸಚಿವರು ಮಾಹಿತಿ ನೀಡಿದರು.
ಈ ಸಾಲಿನ ಮುಂಗಾರು ಬಿತ್ತನೆಯಲ್ಲಿ ಭತ್ತ, ರಾಗಿ, ಮುಸುಕಿನ ಜೋಳ, ಹತ್ತಿ, ತಂಬಾಕು, ದ್ವಿದಳ ಧಾನ್ಯ, ಸೂರ್ಯಕಾಂತಿ, ಕಬ್ಬನ್ನೂ ಈ ವರ್ಷ 3,97,879 ಹೆಕ್ಟೇರ್ನಲ್ಲಿ ಬಿತ್ತನೆ ಗುರಿ ಹೊಂದಿದ್ದು ಇಲ್ಲಿಯವರೆಗೆ 2,11,170 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಶೇಕಡಾ 53 ರಷ್ಟು ಮಾತ್ರ ಬಿತ್ತನೆ ಗುರಿ ಸಾಧಿಸಲಾಗಿದೆ. ಬಿತ್ತನೆ ಬೀಜ ಸರಬರಾಜು, ರಸಗೊಬ್ಬರಗಳ ಸರಬರಾಜಿನಲ್ಲಿ ಯಾವುದೇ ಕೊರತೆ ಆಗದಂತೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ ಎಚ್ ಸಿ ಮಹಾದೇವಪ್ಪ ವಿವರಣೆ ನೀಡಿದರು.
ಇದನ್ನೂಓದಿ: ಭದ್ರಾವತಿ ಆಕಾಶವಾಣಿಗೆ ಎಫ್ ಎಂ ರೇಡಿಯೋ ಮಂಜೂರು.. ಶೀಘ್ರದಲ್ಲೇ ಪ್ರಾರಂಭ: ಸಂಸದ ಬಿ ವೈ ರಾಘವೇಂದ್ರ