ಮೈಸೂರು : ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನದಂದು ಅರಮನೆಯ ಮುಂಭಾಗದಲ್ಲಿ ನಡೆಯಲಿರುವ ಯೋಗ ಕಾರ್ಯಕ್ರಮಕ್ಕೆ ಕೊನೆಗೂ ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಜಿಲ್ಲಾಡಳಿತದಿಂದ ಆಹ್ವಾನ ದೊರೆತಿದೆ. ಪ್ರಧಾನಿ ನರೇಂದ್ರ ಮೋದಿ ಜೊತೆ ಯೋಗ ವೇದಿಕೆಯಲ್ಲಿ ಮಹಾರಾಜರೂ ಪಾಲ್ಗೊಳ್ಳಲಿದ್ದಾರೆ.
ಯೋಗ ವೇದಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿಗಳು, ರಾಜ್ಯಪಾಲರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕೇಂದ್ರದ ಆಯುಷ್ ಮಂತ್ರಿಗಳು ಮಾತ್ರ ಇರಲಿದ್ದಾರೆ ಎಂದು ಈ ಹಿಂದೆ ಹೇಳಲಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತಲ್ಲದೆ ಅಭಿಯಾನ ಆರಂಭವಾಗಿತ್ತು. ಮೈಸೂರಿನ ರಾಜ ವಂಶಸ್ಥರೇ ಇಲ್ಲದ ಕಾರ್ಯಕ್ರಮ ನಮಗೇಕೆ ಎಂದು ನೆಟಿಜನ್ಸ್ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಮೈಸೂರಿನ ಮಹಾರಾಜರಾದ ಯದುವೀರ್ ಸಹ ಪ್ರಧಾನಿ ಜೊತೆ ಯೋಗ ವೇದಿಕೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲಾಗಿದೆ.
ಮಹಾರಾಜರ ಮನೆಯಲ್ಲಿ ಪ್ರಧಾನಿ ಉಪಹಾರ : ಅರಮನೆಯ ಮುಂಭಾಗದಲ್ಲಿ ಜೂನ್ 21ರಂದು ಬೆಳಗ್ಗೆ 6.30ರಿಂದ 7.45ರವರೆಗೆ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ನಂತರ ಮೈಸೂರು ಅರಮನೆಗೆ ಭೇಟಿ ನೀಡಿ, ಅಲ್ಲಿ ರಾಜವಂಶಸ್ಥರ ಆಹ್ವಾನದ ಮೇರೆಗೆ ಉಪಹಾರ ಸೇವಿಸಲಿದ್ದಾರೆ. ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ರಾಜವಂಶಸ್ಥರ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಕೇಂದ್ರದ ಯೋಜನೆಗಳ ವಿರುದ್ಧ ಪ್ರತಿಭಟನೆಗಳು ನಡೆಯದಂತೆ ನೋಡಿಕೊಳ್ಳಬೇಕು: ಸಿಎಂಗೆ ನಡ್ಡಾ ಸಲಹೆ