ಮೈಸೂರು: ಅಪರಾಧದಲ್ಲಿ ಭಾಗಿಯಾದ ಆರೋಪದ ಮೇಲೆ ಠಾಣೆಗಳಲ್ಲಿ ದೂರು ದಾಖಲಾಗಿರುವ ಹಿನ್ನೆಲೆ ಸಮಾಜ ಸೇವಕ ಎಂ ಅಶೋಕ್ ಅವರಿಗೆ ನೀಡಿದ್ದ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
2023-24 ನೇ ಸಾಲಿನ ಕನ್ನಡ ರಾಜ್ಯೋತ್ಸವ ನಿಮಿತ್ತ ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ ವ್ಯಕ್ತಿಗಳನ್ನು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು 50 ಮಂದಿ ಗಣ್ಯರಿಗೆ ನೀಡಲಾಗಿತ್ತು. ಆ ಪೈಕಿ ಮೈಸೂರು ನಗರದ ಅಶೋಕ್ ಅವರಿಗೂ ಸಹ ಸಮಾಜ ಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕ ವಿರುದ್ಧ ಪ್ರಕರಣ: ನವಂಬರ್ 1 ರಂದು ಜಿಲ್ಲಾಮಟ್ಟದ ವೇದಿಕೆಯಲ್ಲಿ ಅಶೋಕ್ ಸೇರಿದಂತೆ 50 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ವಿತರಿಸಿ ಸನ್ಮಾನ ಮಾಡಲಾಗಿತು. ಪ್ರಸ್ತುತ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನಿತರಲ್ಲಿ ಒಬ್ಬರಾಗಿದ್ದ ಅಶೋಕ್ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಕುರಿತಾಗಿ ಮಾಹಿತಿ ಸಿಕ್ಕಿದೆ.
ಅಪರಾಧದ ಆರೋಪದಡಿ ಅಶೋಕ ವಿರುದ್ಧ ನಗರದ ಲಷ್ಕರ್ ಠಾಣೆ, ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಹಿನ್ನೆಲೆ ಆರಕ್ಷಕ ಇಲಾಖೆಯಿಂದ ಮಾಹಿತಿ ಪಡೆದು, ಆ ಬಳಿಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಎಂ.ಅಶೋಕ್ ಅವರಿಗೆ ನೀಡಿದ್ದ ರಾಜ್ಯೋತ್ಸವ ಪ್ರಶಸ್ತಿಯನ್ನು ವಾಪಸ್ ಪಡೆಯಲಾಗಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂಓದಿ:ಮೈಸೂರು: ಡಿ.8 ರಿಂದ ರೈತ ಯುವಕರ ವಿವಾಹದ ಜಾಗೃತಿಗಾಗಿ ಪಾದಯಾತ್ರೆ