ಮೈಸೂರು: ಚಾಮರಾಜನಗರ ಪ್ರಕರದಲ್ಲಿ ಮೈಸೂರು ಜಿಲ್ಲೆಗೆ ಕಳಂಕ ತರುವ ಆರೋಪ ಮಾಡಿದವರು ಜಿಲ್ಲೆಯ ಜನತೆಯ ಕ್ಷಮೆ ಕೇಳಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಚ್ಚ ನ್ಯಾಯಾಲಯ ನೀಡಿರುವ ವರದಿ ಈಗಾಗಲೇ ಎಲ್ಲಾರಿಗೂ ಗೊತ್ತಾಗಿದೆ. ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಬಂದ ದಿನದಿಂದ ಕೆಲವೊಬ್ಬರು ಇಲ್ಲ ಸಲ್ಲದ ಆರೋಪ ಮಾಡುತ್ತಾ ಬಂದಿದ್ದಾರೆ. ಇದಕ್ಕೆಲ್ಲಾ ನಾನು ಪ್ರತಿಕ್ರಿಯೆ ನೀಡಿಲ್ಲ. ನೀಡುವುದೂ ಇಲ್ಲ ಎಂದರು.
ಚಾಮರಾಜನಗರ ಪ್ರಕರಣದಲ್ಲಿ ನಮ್ಮ ಮೇಲೆ ಆರೋಪ ಮಾಡಲು ಹೋಗಿ ಇಡೀ ಮೈಸೂರು ಜಿಲ್ಲೆಗೆ ಹಾಗೂ ಜನತೆಗೆ ಕಳಂಕ ತರುವ ಪ್ರಯತ್ನ ನಡೆದಿತ್ತು. ಜೊತೆಗೆ ಕೆಲವರು ವೈಯಕ್ತಿಕವಾಗಿ ಸಹ ಆರೋಪ ಮಾಡಿದ್ದರು. ಆದರೆ ಮೈಸೂರು ಜಿಲ್ಲೆಯವರು ಈ ಕಳಂಕದಿಂದ ಹೊರ ಬಂದಿದ್ದೇವೆ. ನಾವು ಈ ಹುದ್ದೆಗೆ ಬಂದಿರುವುದು ದೇಶ ಸೇವೆ ಮಾಡಲು. ಸಣ್ಣ ಪುಟ್ಟ ಆರೋಪಗಳನ್ನು ಮಾಡುವ ಶಾಸಕರು, ಮಾಜಿ ಕಾರ್ಪೋರೇಟರ್ಗೆ ಉತ್ತರ ಕೊಡುವುದಿಲ್ಲ. ಕಾಲ ಎಲ್ಲವನ್ನು ನಿರ್ಧರಿಸಲಿದೆ. ಇದು ಸಾಂಕ್ರಾಮಿಕ ಸಮಯವಾದ ಕಾರಣ ಎಲ್ಲರು ಒಟ್ಟಾಗಿ ಸೇರಿ ಕೆಲಸ ಮಾಡಿದರೆ ಮಾತ್ರ ಜನ ಜೀವ ಉಳಿಸಲು ಸಾಧ್ಯ ಎಂದರು.
ಬಳಿಕ ಬಸವಣ್ಣನ ವಚನ ಹೇಳಿ ಸಂಕಷ್ಟದ ಸಮಯದಲ್ಲಿ ನಾಡ ದೇವತೆ ಚಾಮುಂಡಿ ತಾಯಿ ಎಲ್ಲಾರಿಗೂ ಸಮೃದ್ಧಿ ನೀಡಲಿ ಎಂದು ಬೇಡಿಕೊಳ್ಳುತ್ತೇನೆ ಎಂದರು.
ಓದಿ: ಆಕ್ಸಿಜನ್ ಕೊರತೆ ಚಾಮರಾಜನಗರ ದುರಂತಕ್ಕೆ ಕಾರಣ; ಡಿಸಿ ರೋಹಿಣಿ ಸಿಂಧೂರಿಗೆ ಕ್ಲೀನ್ಚಿಟ್