ಮೈಸೂರು: ದಸರಾದ ಸಾಂಸ್ಕೃತಿಕ ರಾಯಭಾರಿಗಳಾದ ಗಜ ಪಡೆಯನ್ನು ಸ್ವಾಗತಿಸುವ 'ಗಜ ಪಯಣ' ಕಾರ್ಯಕ್ರಮ ಆಗಸ್ಟ್ 7 ರಂದು ನಾಗರಹೊಳೆ ಹೆಬ್ಬಾಗಿಲಿನ ವೀರನ ಹೊಸಹಳ್ಳಿಯಲ್ಲಿ ನಡೆಯಲಿದೆ. ಈ ಕುರಿತು ಡಿಸಿಎಫ್ ಕಾರಿಕಾಲನ್ ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.
ಅಕ್ಟೋಬರ್ ತಿಂಗಳಿನಲ್ಲಿ ನಡೆಯಲಿರುವ ದಸರಾದಲ್ಲಿ ಈ ಬಾರಿ 14 ಆನೆಗಳು ಪಾಲ್ಗೊಳ್ಳಲಿವೆ. ಇದಕ್ಕೆ ಪೂರ್ವಭಾವಿಯಾಗಿ ಮೊದಲ ಹಂತದಲ್ಲಿ ಅರ್ಜುನ ಹಾಗೂ ಅಭಿಮನ್ಯು ಆನೆ ಸೇರಿದಂತೆ 9 ಆನೆಗಳು ಆಗಸ್ಟ್ 7ರ ಭಾನುವಾರ ಬೆಳಗ್ಗೆ 9 ಗಂಟೆ 01 ನಿಮಿಷದಿಂದ 9 ಗಂಟೆ 35 ನಿಮಿಷದ ಶುಭ ಮುಹೂರ್ತದಲ್ಲಿ ವೀರನ ಹೊಸಹಳ್ಳಿಯಲ್ಲಿ ಪೂಜೆ ಸಲ್ಲಿಸುವ ಜೊತೆಗೆ ಗಜ ಪಯಣ ನಡೆಸಲಿವೆ.
ಗಜ ಪಯಣದ ನಂತರ ವೇದಿಕೆ ಕಾರ್ಯಕ್ರಮ ಇರಲಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಅರಣ್ಯ ಸಚಿವ ಉಮೇಶ್ ಕತ್ತಿ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ. ಗಜ ಪೂಜೆಯ ನಂತರ ಮೊದಲ ಹಂತದಲ್ಲಿ ಆಗಮಿಸುವ 9 ಅನೆಗಳ ಗಜ ಪಡೆಯನ್ನು ಲಾರಿಗಳ ಮೂಲಕ ಮೈಸೂರಿನ ಅರಣ್ಯ ಭವನಕ್ಕೆ ಕರೆತರಲಾಗುವುದು. ಅರಣ್ಯ ಭವನದಲ್ಲಿ 3 ದಿನಗಳ ತಾತ್ಕಾಲಿಕ ವಾಸ್ತವ್ಯ ಹೂಡಲಿರುವ ಗಜಪಡೆಯನ್ನು ಆಗಸ್ಟ್ 10 ರಂದು ಅರಣ್ಯ ಭವನದಲ್ಲಿ ಪೂಜೆ ಸಲ್ಲಿಸಿ ಅರಮನೆಗೆ ಕರೆತಂದು ಅಲ್ಲಿ ಅರಮನೆ ಮುಂಬಾಗದ ಜಯ ಮಾರ್ತಾಂಡ ದ್ವಾರದಲ್ಲಿ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿ ಅರಮನೆ ಪ್ರವೇಶ ಮಾಡಿಕೊಳ್ಳಲಾಗುವುದು.
ಅರಮನೆಯ ಪ್ರವೇಶ ಪಡೆದ ಗಜ ಪಡೆಗೆ ಈಗಾಗಲೇ ವಿಶೇಷ ಶೆಡ್ಗಳನ್ನು ನಿರ್ಮಿಸಲಾಗಿದ್ದು, ಮಾವುತರು, ಕಾವಾಡಿಗರು ಹಾಗೂ ಅವರ ಕುಟುಂಬಗಳಿಗೆ ವಿಶೇಷ ಶೆಡ್ಗಳನ್ನು ವಾಸಕ್ಕಾಗಿ ನಿರ್ಮಾಣ ಮಾಡಲಾಗಿದೆ. ಆನೆಗೆ ವಿಶೇಷ ಆಹಾರ ನೀಡಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಅರಮನೆಗೆ ಆಗಮಿಸುವ ಗಜ ಪಡೆಗೆ ಯಾವುದೇ ರೀತಿಯ ಕುಂದುಕೊರತೆ ಉಂಟಾಗದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಾವುತರು ಹಾಗೂ ಕಾವಾಡಿಗಳ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದನ್ನೂ ಓದಿ: ಚೆನ್ನೈ ಏರ್ಪೋರ್ಟ್‌ನಲ್ಲಿ ದಶಕಕ್ಕೂ ಹೆಚ್ಚು ಕಾಲ ಸೇವೆ; ಶ್ವಾನ 'ರಾಣಿ'ಗೆ ಬೀಳ್ಕೊಡುಗೆ