ಮೈಸೂರು: ಬಹಳ ದಿನಗಳ ನಂತರ ದಸರಾದಲ್ಲಿ ಏರ್ ಶೋ ನಡೆಯುತ್ತಿರುವುದರಿಂದ ನೂಕು ನುಗ್ಗಲು ಉಂಟಾಗಬಹುದು. ಆದ್ದರಿಂದ ಅಕ್ಟೋಬರ್ 23 ರಂದು ಏರ್ ಶೋ ನಡೆಯುವ ದಿನ, ಒಂದು ಗಂಟೆ ಮುಂಚಿತವಾಗಿ ಬರಬೇಕು ಎಂದು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಏರ್ ಶೋ ಮತ್ತು ಜಂಬೂ ಸವಾರಿಗೆ ಗಜಪಡೆ ಮತ್ತು ಅಶ್ವಪಡೆ ಸಿದ್ದತೆ ಬಗ್ಗೆ ಮಾಹಿತಿ ನೀಡಿದರು.
ಇಂದು ಅಂತಿಮ ಹಂತದ ಗಜಪಡೆ ಮತ್ತು ಅಶ್ವಪಡೆ ಕುಶಾಲತೋಪು ತಾಲೀಮು ವೀಕ್ಷಣೆ ಮಾಡಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ, ಅಕ್ಟೋಬರ್ 23 ಆಯುಧ ಪೂಜೆ ಹಾಗೂ ಅಕ್ಟೋಬರ್ 24 ರಂದು ವಿಜಯದಶಮಿ ದಿನವಿದೆ. ಈ ಹಿನ್ನೆಲೆ 3 ಬಾರಿ ಗಜಪಡೆ ಹಾಗೂ ಅಶ್ವಪಡೆಗೆ ಕುಶಾಲತೋಪು ತಾಲೀಮು ನಡೆಸಿದ್ದೇವೆ. ಈ ತಾಲೀಮು ಅಂತಿಮವಾಗಿದ್ದು, ಇನ್ನೂ ಮೂರು ದಿನಗಳು ಅರಮನೆಯ ಒಳಗೆ ರಿಹರ್ಸಲ್ ನಡೆಯಲಿದೆ. ಆ ಮೂಲಕ ಗಜಪಡೆ, ಅಶ್ವಪಡೆ ಹಾಗೂ ಕುಶಾಲತೋಪು ಸಿಡಿಸುವ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಅರಮನೆಯ ಒಳಗೆ ಅಂತಿಮ ಹಂತದ ತಾಲೀಮು ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಏರ್ ಶೋ ಬಗ್ಗೆ ಹೇಳಿದ್ದೇನು? : ಬಹಳ ವರ್ಷಗಳ ನಂತರ ಏರ್ ಶೋ ನಡೆಯುತ್ತಿದೆ. ಅಕ್ಟೋಬರ್ 22 ರಂದು ಏರ್ ಶೋ ತಾಲೀಮು ಹಾಗೂ ಅಕ್ಟೋಬರ್ 23 ರಂದು 4 ಗಂಟೆಯಿಂದ 1 ಗಂಟೆಗಳ ಕಾಲ ಏರ್ ಶೋ ನಡೆಯಲಿದೆ. ಅದೇ ದಿನ ಅಕ್ಟೋಬರ್ 23 ರಂದು ಸಂಜೆ ಪಂಜಿನ ಕವಾಯತು ತಾಲೀಮು ಸಹ ನಡೆಯಲಿದೆ. ಅದಕ್ಕಾಗಿ ಒಂದು ಪಾಸ್ ವ್ಯವಸ್ಥೆ ಮಾಡಲಾಗುವುದು. ಏರ್ ಶೋ ದಿನ, 3 ಗಂಟೆಯೊಳಗೆ ಪಂಜಿನ ಕವಾಯಿತಿನ ಮೈದಾನಕ್ಕೆ ಬರಬೇಕು. ಪಾರ್ಕಿಂಗ್ ವ್ಯವಸ್ಥೆಯಲ್ಲಿ ವಾಹನ ಪಾರ್ಕ್ ಮಾಡಿ ಬರಬೇಕು. ಅಂದು ಏರ್ ಶೋ ಹಾಗೂ ಪಂಜಿನ ಕವಾಯಿತಿನ ರಿಹರ್ಸಲ್ ಇರುವುದರಿಂದ ನೂಕು ನುಗ್ಗಲು ಉಂಟಾಗಬಹುದು. ಅದಕ್ಕೆ ಮೊದಲೇ ಸ್ಥಳಕ್ಕೆ ಬರಬೇಕು ಎಂದು ಜಿಲ್ಲಾಧಿಕಾರಿಗಳು ವಿವರಣೆ ನೀಡಿದರು.
ಇನ್ನು ಈ ದಸರಾದಲ್ಲಿ ಸ್ಟ್ರೀಟ್ ಫೆಸ್ಟ್ ಪ್ರಪೋಸಲ್ ನಮ್ಮ ಮುಂದೆ ಇಲ್ಲ. ಈ ಕಾರ್ಯಕ್ರಮ ಮಾಡಲು ಟೂರಿಸಂ ಡಿಪಾರ್ಟ್‌ಮೆಂಟ್ ಅನುದಾನ ಕೇಳಿದೆ. ಇದರ ಬಗ್ಗೆ ಪರ - ವಿರೋಧ ಚರ್ಚೆ ಇದೆ. ದಸರಾದಲ್ಲಿ ಸ್ಟ್ರೀಟ್ ಫೆಸ್ಟ್ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ಹೇಳಿದ ಜಿಲ್ಲಾಧಿಕಾರಿ, ಈ ಬಾರಿ ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ನೆರವಾಗುವ ಕಾರ್ಯಕ್ರಮಗಳನ್ನು ಮಾಡಿ ಎಂದು ಸಿಎಂ ಹೇಳಿದ್ದರು.
ಅದರಂತೆ ಸ್ಥಳೀಯ ಹಾಗೂ ಬೇರೆ ಕಡೆಯಿಂದ ಬಂದ ಕಲಾವಿದರನ್ನು ಒಟ್ಟಿಗೆ ಸೇರಿಸಿ ಕಾರ್ಯಕ್ರಮಗಳನ್ನು ರೂಪಿಸಿದ್ದೇವೆ ಎಂದ ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ, ಪ್ರವಾಸಿಗರ ವಾಹನಗಳಿಗೆ ತೆರಿಗೆ ವಿನಾಯಿತಿ ನೀಡಿರುವ ಬಗ್ಗೆ ಮಾಹಿತಿಯನ್ನು ತಿಳಿಸಿದ್ದೇವೆ. ಇದರ ವಿಸ್ತರಣೆ ಬಗ್ಗೆ ಚೆಕ್ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.
ಇದನ್ನೂ ಓದಿ: ದಸರಾ ದರ್ಶಿನಿ: ನವರಾತ್ರಿ ಹಿನ್ನೆಲೆ ದೇವಾಲಯ ದರ್ಶನಕ್ಕೆ ಕೆಎಸ್ಆರ್ಟಿಸಿಯಿಂದ ವಿಶೇಷ ಪ್ಯಾಕೇಜ್