ಮೈಸೂರು: ಮುಡಾ ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಹಾಗೂ ಅನಧಿಕೃತ ನಿವೇಶನಗಳ ವಂಚನೆ ತಡೆಯಲು ಜಾಗೃತಿ ದಳ ರಚಿಸಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಹೇಳಿದರು.
ಮುಡಾ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಡಾ ವ್ಯಾಪ್ತಿಯಲ್ಲಿ ನಿವೇಶನಗಳನ್ನು ಕೆಲವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಅಲ್ಲದೆ ಮುಡಾ ನಿವೇಶನಗಳನ್ನು ಕೆಲವರು ಅನಧಿಕೃತವಾಗಿ ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇವುಗಳ ತಡೆಗೆ ಡಿವೈಎಸ್ಪಿ ನೇತೃತ್ವದಲ್ಲಿ ಮುಡಾ ಜಾಗೃತಿ ದಳ ರಚನೆ ಮಾಡಲು ನಿರ್ಣಯ ಮಾಡಲಾಗಿದೆ. ಇದರ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.
ಮುಡಾ ಮತ್ತು ಭೂ ಮಾಲೀಕರ ಜಂಟಿ ಸಹಭಾಗಿತ್ವದಲ್ಲಿ ಬಡಾವಣೆ ಅಭಿವೃದ್ಧಿ ಮಾಡಲಾಗುವುದು. ಮುಡಾ ವಶಪಡಿಸಿಕೊಂಡ ಭೂಮಿಯನ್ನು 18 ತಿಂಗಳೊಳಗೆ ಒಡಂಬಡಿಕೆಯೊಂದಿಗೆ ಪೂರ್ಣಗೊಳಿಸಿ, ನಿವೇಶನ ಮಾರಾಟ ಮಾಡಲಾಗುವುದು. ಭೂಮಿ ನೀಡುವವರಿಗೆ 10 ಲಕ್ಷ ಮುಂಗಡ ಹಣ, ಅವರಿಂದ ಜಮೀನು ಖರೀದಿ ಮಾಡಿದರೆ 1 ಎಕರೆಗೆ ಒಂದು ಕೋಟಿ ರೂ. ನೀಡಲಾಗುವುದು ಎಂದು ತಿಳಿಸಿದರು.