ಮೈಸೂರು: ಯಡಿಯೂರಪ್ಪನವರು ಹೈಕಮಾಂಡ್ ಜೊತೆ ಚರ್ಚೆ ಮಾಡಿ, ಪಟ್ಟಿ ಫೈನಲ್ ಮಾಡಿ ಕಾಲಹರಣ ಮಾಡುವುದು ಬೇಡ, ಯಾರ ತಾಳ್ಮೆ ಪರೀಕ್ಷೆ ಮಾಡುವುದು ಬೇಡ ಎಂದು ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಇಂದು ತಮ್ಮ ಮನೆಯಲ್ಲಿ ಮಾಧ್ಯಮಗಳ ಜೊತೆ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಅವರು,12 ಜನ ಪಕ್ಷ ಬಿಟ್ಟು ಬಂದು ಕಾಂಗ್ರೆಸ್ ಮತ್ತು ಜೆಡಿಎಸ್ನ ಸಂಮಿಶ್ರ ಸರ್ಕಾರದ ಪರಿಣಾಮ ಏನಾಯಿತು ಎಂದು ಎಲ್ಲರಿಗೂ ಗೊತ್ತು. ಬಿಜೆಪಿಯಿಂದ ನಿಂತು 11 ಜನ ಗೆದ್ದು ಬಂದಿದ್ದಾರೆ. ಯಡಿಯೂರಪ್ಪ 11 ಜನ ಶಾಸಕರ ಜೊತೆ ಮಾತನಾಡಿ, ಏನು ಭರವಸೆ ಕೊಟ್ಟಿದ್ದಾರೋ ಅದು ಸಿಎಂ ಮತ್ತು ಶಾಸಕರಿಗೆ ಗೊತ್ತಿರುವಂತದ್ದು. ಈ ವಿಚಾರವನ್ನು ಹೈಕಮಾಂಡ್ ಜೊತೆ ಚರ್ಚಿಸಿ ಪಟ್ಟಿ ಫೈನಲ್ ಮಾಡಬೇಕಾಗಿರುವುದು ಅವರ ಜವಾಬ್ಧಾರಿ ಎಂದರು.
ಇನ್ನು ಈ ವಿಚಾರದಲ್ಲಿ ಕಾಲಹರಣ ಮಾಡುವುದು ಒಳ್ಳೆಯದಲ್ಲ. ಯಾರ ತಾಳ್ಮೆಯನ್ನು ಪರೀಕ್ಷೆ ಮಾಡುವುದು ಬೇಡ. ಪಕ್ಷದ ದೃಷ್ಟಿಯಿಂದ ಇನ್ನೂ ಮೂರೂವರೆ ವರ್ಷಗಳ ಕಾಲ ಉತ್ತಮ ಆಡಳಿತ ಕೊಡಲು ಅವಕಾಶವಿದೆ. ಈ ವಿಚಾರದಲ್ಲಿ ಯಡಿಯೂರಪ್ಪನವರು ಹೈಕಮಾಂಡ್ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.