ಮೈಸೂರು: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯನವರಿಗೆ ಮತ ಹಾಕಿದ್ರೆ ತಾಲಿಬಾನ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಕಪಾಲಿ ಬೆಟ್ಟವನ್ನು ಯೇಸು ಬೆಟ್ಟವನ್ನಾಗಿ ಮಾಡುತ್ತಾರೆ ಎಂದು ನಿನ್ನೆ ಬಿಜೆಪಿಯ ಶಕ್ತಿಕೇಂದ್ರದ ಪ್ರಮುಖರ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಇದೇ ಹೇಳಿಕೆಯನ್ನು ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪುನರುಚ್ಚರಿಸಿದ ಅವರು ಸಮರ್ಥಿಸಿಕೊಂಡಿದ್ದಾರೆ.
ಜಲದರ್ಶಿನಿ ಅತಿಥಿ ಗೃಹದಲ್ಲಿ ಮೈಸೂರು ವಿಮಾನ ನಿಲ್ದಾಣ ಉನ್ನತೀಕರಣ ಹಾಗೂ ವಿಸ್ತರಣೆಗೆ ಸಂಬಂಧಿಸಿದಂತೆ ವಿಮಾನ ನಿಲ್ದಾಣದ ನಿರ್ದೇಶಕರು, ಕೆಐಎಡಿಬಿ ಹಾಗೂ ಇತರೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಸಭೆ ನಡೆಸಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಸಿದ್ದರಾಮಯ್ಯನವರ ಆಡಳಿತ ಅವಧಿಯಲ್ಲಿ ಪಿಎಫ್ಐ ಮತ್ತು ಕೆಎಫ್‌ಡಿಯ 1,600 ಸಮಾಜಘಾತುಕ ಶಕ್ತಿಗಳ ವಿರುದ್ಧ ಇದ್ದ ಸುಮಾರು 175 ಕ್ರಿಮಿನಲ್ ಪ್ರಕರಣಗಳನ್ನು ಪೊಲೀಸ್ ಇಲಾಖೆಯ ವಿರೋಧದ ನಡುವೆಯೂ ಸಚಿವ ಸಂಪುಟದ ಮುಂದಿಟ್ಟು ಪ್ರಕರಣ ವಾಪಸ್ ಪಡೆದರು. ಆ ಕಾರಣದಿಂದಲೇ ಮೈ ಮರೆತು ಕಾಂಗ್ರೆಸ್ಗೆ ಮತ ನೀಡಿದರೆ ತಾಲಿಬಾನ್ ಸರ್ಕಾರ ಬರುತ್ತದೆ ಎಂದು ಹೇಳಿದ್ದೆ ಎಂದರು.
ಮಾರ್ಚ್ಗೆ ಎಕ್ಸ್ಪ್ರೆಸ್ ಹೈವೇ ಉದ್ಘಾಟನೆ: ಮುಂದಿನ ಮಾರ್ಚ್ ತಿಂಗಳ 11 ಅಥವಾ 12 ರಂದು ಬೆಂಗಳೂರು-ಮೈಸೂರು ನಡುವಿನ ಎಕ್ಸ್ಪ್ರೆಸ್ ಹೈವೇಯನ್ನು ಮಂಡ್ಯದ ಬಳಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ. ಅದೇ ದಿನ ಮೈಸೂರು- ಕುಶಾಲನಗರ ಹೆದ್ದಾರಿಗೂ ಗುದ್ದಲಿ ಪೂಜೆ ಆಗಲಿದೆ. ಹೆದ್ದಾರಿ ವಿಚಾರದಲ್ಲಿ ಮಂಡ್ಯದಲ್ಲಿ ನಮ್ಮ ಜನಪ್ರತಿನಿಧಿಗಳು ಇಲ್ಲದೇ ಇದ್ದರೂ ಯಾವುದೇ ತಾರತಮ್ಯ ಮಾಡಿಲ್ಲ. ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದ್ದೇವೆ. ಬೆಂಗಳೂರು-ಮೈಸೂರು ನಡುವಿನ ಎಕ್ಸ್ಪ್ರೆಸ್ ಹೈವೇಗೆ ವ್ಯಕ್ತಿಯ ಹೆಸರು ಇಡುವ ಬದಲು ದಕ್ಷಿಣ ಭಾರತದ ಜೀವನದಿ ಕಾವೇರಿಯ ಹೆಸರನ್ನು ಅಂದರೆ ಕಾವೇರಿ ಎಕ್ಸ್ಪ್ರೆಸ್ ಎಂದು ಹೆಸರಿಡಲು ಎಲ್ಲರ ಸಹಕಾರ ಕೇಳುತ್ತೇನೆ ಎಂದು ಮನವಿ ಮಾಡಿದರು.
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ: ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆಗೆ ಮೊದಲ ಹಂತದಲ್ಲಿ 150 ಕೋಟಿ ಹಣ ಬಿಡುಗಡೆ ಆಗಿದ್ದು, ಶೀಘ್ರವೇ ಭೂಮಿ ಪೂಜೆ ಮಾಡಲಾಗುವುದು. ಒಟ್ಟು ವಿಸ್ತರಣೆಗೆ 160 ಎಕರೆ ಜಾಗಬೇಕು, ಅದರಲ್ಲಿ ಕೇವಲ 47 ಎಕರೆ ನೋಟಿಫಿಕೇಶನ್ ಆಗಿದೆ. ವಿಮಾನ ನಿಲ್ದಾಣದ ಮುಂಭಾಗದಲ್ಲಿ ಬರುವ ಮೈಸೂರು ಮತ್ತು ನಂಜನಗೂಡು ನಡುವಿನ ಹೆದ್ದಾರಿಯನ್ನು ಡೈವರ್ಟ್ ಮಾಡಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: ಬೆಂಗಳೂರು ಮೈಸೂರು ಹೆದ್ದಾರಿಗೆ ಕಾವೇರಿ ನದಿ ಹೆಸರಿಡಲು ಮನವಿ: ಸಂಸದ ಪ್ರತಾಪ್ ಸಿಂಹ
ರಾಜ್ಯ ರಾಜಕಾರಣಕ್ಕೆ ಬರುವುದಿಲ್ಲ: ನಾನು 2029ರ ವರೆಗೆ ಮಾತ್ರ ರಾಜಕಾರಣದಲ್ಲಿ ಅದರಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಕೈ ಕೆಳಗೆ ಕೆಲಸ ಮಾಡಲು ಇಚ್ಛೆ ಪಡುತ್ತೇನೆ. ಮೋದಿ ನನ್ನ ಪಾಲಿನ ದೇವರು. ಈಗ ಎರಡು ಬಾರಿ ಸಂಸದನಾಗಿದ್ದೇನೆ, ಮುಂದೆ ಒಂದು ಬಾರಿ ಅಂದರೆ ಒಟ್ಟು 15 ವರ್ಷ ಒಬ್ಬ ಸಂಸದ ಎಷ್ಟು ಕೆಲಸ ಮಾಡಬಹುದೋ ಅದನ್ನು ಮಾಡುತ್ತೇನೆ. ನಾನು ಲಾಂಗ್ ಟೈಮ್ ಪಾಲಿಟಿಕ್ಸ್ ಬಗ್ಗೆ ಯೋಚನೆ ಮಾಡಿಲ್ಲ. ಅನಂತರ ರಾಜಕಾರಣದಲ್ಲಿ ಇರಬೇಕಾ ಅಥವಾ ಬೇಡವೇ ಎಂಬ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ರಾಜ್ಯ ರಾಜಕಾರಣಕ್ಕೆ ಪ್ರತಾಪ್ ಸಿಂಹ ಬರುತ್ತಾರೆಯೇ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
ಯಡಿಯೂರಪ್ಪನವರ ಬಗ್ಗೆ..: ಬಿಜೆಪಿಯ ಪ್ರಮುಖ ನಾಯಕರಾದ ಯಡಿಯೂರಪ್ಪನವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾದರೂ ಸಕ್ರಿಯ ರಾಜಕಾರಣದಲ್ಲಿ ಉಳಿದು, ಸಿದ್ದರಾಮಯ್ಯ ಹಾಗೂ ಇತರೆ ನಾಯಕರ ರಾಜಕೀಯವನ್ನು ಮುಗಿಸಿ ನಂತರ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುತ್ತಾರೆ. ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುತ್ತಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.