ಮೈಸೂರು : ಮೈಸೂರು-ಬೆಂಗಳೂರಿನ ನಡುವೆಯ ರಾಜ್ಯದ ಮೊದಲ ಎಕ್ಸ್‌ಪ್ರೆಸ್ ಹೈವೇ ಪ್ರಗತಿ ಕಾಮಗಾರಿಯನ್ನು ಸಂಸದ ಪ್ರತಾಪ್ ಸಿಂಹ ಅವರು ಪರಿಶೀಲನೆ ನಡೆಸಿದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಿರ್ಮಾಣವಾಗುತ್ತಿರುವ ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಕೇವಲ 90 ನಿಮಿಷದಲ್ಲೇ ಮೈಸೂರಿನಿಂದ ಬೆಂಗಳೂರಿಗೆ ತಲುಪುವ ಗುರಿ ಹೊಂದಿದೆ. ಬರೋಬ್ಬರಿ 7,400 ಕೋಟಿ ರೂ.ಮೊತ್ತದ ಯೋಜನೆಯಾಗಿದೆ.
ಮಂಡ್ಯ, ರಾಮನಗರ, ಚನ್ನಪಟ್ಟಣ, ಶ್ರೀರಂಗಪಟ್ಟಣ ಸೇರಿ 51 ಕಿ.ಮೀ ಉದ್ದದ 6 ಬೈಪಾಸ್, 8 ಕಿ.ಮೀ ಎಲಿವೇಟೆಡ್ ಕಾರಿಡಾರ್, ರಾಮನಗರ ಬಳಿ ವಿಶ್ರಾಂತಿ ತಾಣ, 60 ಅಂಡರ್ ಪಾಸ್, 2 ಟೋಲ್ ಒಳಗೊಂಡ ಹೆದ್ದಾರಿ ಇದು.
ಈಗಾಗಲೇ ಮೊದಲ ಪ್ಯಾಕೇಜ್ ಶೇ.51.20, ಎರಡನೇ ಪ್ಯಾಕೇಜ್ ಶೇ.30.12ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್ ಶ್ರೀಧರ್ ಹಾಗೂ ಭೂಸ್ವಾಧೀನ ಅಧಿಕಾರಿ ದೇವರಾಜು ಹಾಗೂ ಅಧಿಕಾರಿಗಳು ಸಂಸದರಿಗೆ ಹೈವೇ ಕಾಮಗಾರಿಯ ಬಗ್ಗೆ ಮಾಹಿತಿ ನೀಡಿದರು.