ಮೈಸೂರು: ತಾಯಿಯೊಂದಿಗೆ ಜಗಳವಾಡುತ್ತಿದ್ದ ವೇಳೆ ಮಗಳು ಜೋರಾಗಿ ತಳ್ಳಿದ್ದರಿಂದ ತಾಯಿ ಕೆಳೆಗೆ ಬಿದ್ದು ತಲೆಗೆ ಮಂಚ ಬಡಿದು ಸ್ಥಳದಲ್ಲೇ ಮೃತ ಪಟ್ಟಿದ್ದರಿಂದ ಯಾರಿಗೂ ಗೊತ್ತಾಗದಂತೆ ಸ್ಮಶಾನದಲ್ಲಿ ಹೂತಿಟ್ಟ ಪ್ರಕರಣ 13 ತಿಂಗಳ ನಂತರ ಪೊಲೀಸ್ ತನಿಖೆಯಿಂದ ಬಯಲಾಗಿದೆ. ಮಗಳು ತಾಯಿ ನಾಪತ್ತೆಯಾಗಿರುವ ಕುರಿತು ನೀಡಿದ ದೂರನ್ನು ಆಧರಿಸಿ ತನಿಖೆ ಕೈಗೊಂಡಿದ್ದ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯ ಹೆಬ್ಬಾಕವಾಡಿ ಗ್ರಾಮದ ನಿವಾಸಿ ಶಾರದಮ್ಮ ಮಗಳಿಂದ ಹತ್ಯೆಯಾದ ದುರ್ದೈವಿಯಾಗಿದ್ದು. ಈ ಪ್ರಕರಣದಡಿ ಮಗಳು ಅನುಷಾ ಮತ್ತು ಅವರ ಗಂಡ ದೇವರಾಜ್ ಜೈಲು ಪಾಲಾಗಿದ್ದಾರೆ.
ಏನಿದು ಪ್ರಕರಣ?: ಮಂಡ್ಯ ಜಿಲ್ಲೆಯ ಹೆಬ್ಬಾಕವಾಡಿ ಗ್ರಾಮದಲ್ಲಿ ಶಾರದಮ್ಮಗಂಡನ ನಿಧನದ ನಂತರ ಒಂಟಿಯಾಗಿ ವಾಸವಿದ್ದರು. ಮಗಳನ್ನು ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದ ಹಾರೋಹಳ್ಳಿಯ ದೇವರಾಜ್ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದರು. ಈ ವೇಳೆ, ತಾಯಿಗೆ ಕಣ್ಣಿನ ತೊಂದರೆ ಕಾಣಿಸಿಕೊಂಡಿದ್ದು, ಆಗ ಮಗಳಿಗೆ ಕಣ್ಣಿನ ಚಿಕಿತ್ಸೆ ಕೊಡಿಸುವಂತೆ ಕೇಳಿಕೊಂಡಿದ್ದರು. ಆದರೆ, ಹಣಕಾಸಿನ ತೊಂದರೆಯಿಂದ ಮಗಳು ವಿಳಂಬ ಮಾಡಿದ್ದಳು.
ಕೊನೆಗೆ 2022 ರ ನವೆಂಬರ್ನಲ್ಲಿ ತಾಯಿಗೆ ಕಣ್ಣಿನ ಚಿಕಿತ್ಸೆ ಮಾಡಿಸಿ, ಪುನಃ ಸ್ವಗ್ರಾಮ ಮಂಡ್ಯ ಜಿಲ್ಲೆಯ ಹೆಬ್ಬಾಕವಾಡಿ ಗ್ರಾಮಕ್ಕೆ ಬಿಟ್ಟು ಬರಲು ಹೋಗಿದ್ದರು. ಆ ಸಂದರ್ಭದಲ್ಲಿ ತಾಯಿ ಶಾರದಮ್ಮ ಮಗಳಿಗೆ ಕಣ್ಣಿನ ಚಿಕಿತ್ಸೆ ಕೊಡಿಸಲು ವಿಳಂಬ ಮಾಡಿದ್ದರಿಂದ ಜಗಳ ಶುರುವಾಗಿ ಅದು ವಿಕೋಪಕ್ಕೆ ತಿರುಗಿ, ಮಗಳು ಅನುಷಾ ತಾಯಿಯನ್ನು ಜೋರಾಗಿ ತಳ್ಳಿದ್ದರು. ಕೆಳಗೆ ಬಿದ್ದ ತಾಯಿ ಶಾರದಮ್ಮನ ತಲೆ ಮಂಚಕ್ಕೆ ಬಡಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದರು. ಇದರಿಂದ ಕಂಗಾಲಾದ ಮಗಳು ಗಂಡನ ಜೊತೆ ರಾತ್ರಿ ಅದೇ ಗ್ರಾಮದ ಸ್ಮಶಾನದಲ್ಲಿ ಹೂತು, ಯಾರಿಗೂ ಗೊತ್ತಾಗದಂತೆ ಗಂಡನ ಮನೆಗೆ ಬಂದು ಸುಮ್ಮನಿದ್ದರು.
ಮಗಳಿಂದಲೇ ತಾಯಿ ನಾಪತ್ತೆ ದೂರು ದಾಖಲು: ಶಾರದಮ್ಮ ಕಾಣೆಯಾಗಿರುವ ಕುರಿತಾಗಿ ಶಾರದಮ್ಮನ ಸೋದರಿ ದೇವಮ್ಮ ಅನುಷಾಗೆ ಕರೆಮಾಡಿ ವಿಚಾರಿಸಿದ್ದರು. ದೇವಮ್ಮನ ಒತ್ತಾಯಕ್ಕೆ ಮಣಿದು ಎಂಟು ತಿಂಗಳ ಬಳಿಕ 2023 ರ ಜೂನ್ ನಲ್ಲಿ ತಾಯಿ ನಾಪತ್ತೆಯಾಗಿದ್ದಾಳೆ ಎಂದು ಮೈಸೂರು ಜಿಲ್ಲೆಯ ವರುಣಾ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ಬಗ್ಗೆ ಪೋಲಿಸರು ತನಿಖೆ ಶುರು ಮಾಡಿದರು. ಮಗಳು ಅನುಷಾಳ ವರ್ತನೆ ಮೇಲೆ ಅನುಮಾನಗೊಂಡು ಪೊಲೀಸರು ವಿಚಾರಣೆ ನಡೆಸಿದ್ದ ವೇಳೆ ಕೊಲೆ ಪ್ರಕರಣ 13 ತಿಂಗಳ ನಂತರ ಬೆಳಕಿಗೆ ಬಂದಿತ್ತು.
ಮಂಡ್ಯ ಜಿಲ್ಲೆಗೆ ಪ್ರಕರಣ ವರ್ಗಾವಣೆ :ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದರಿಂದ ಮೈಸೂರು ಜಿಲ್ಲೆಯ ವರುಣಾ ಪೊಲೀಸ್ ಠಾಣೆಯಿಂದ ಮಂಡ್ಯ ಜಿಲ್ಲೆಯ ಪೊಲೀಸ್ ಠಾಣೆ ವ್ಯಾಪ್ತಿಗೆ ವರ್ಗಾಯಿಸಲಾಗಿದೆ. ಈ ಪ್ರಕರಣ ವರ್ಗಾವಣೆಯಾದ ನಂತರ ಪೊಲೀಸರು ಮೃತ ಶಾರದಮ್ಮನವರ ಮರಣೋತ್ತರ ಪರೀಕ್ಷೆಯನ್ನು ಕೈಗೊಳ್ಳಲಿದ್ದಾರೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಈಟಿವಿ ಭಾರತ್ ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:9 ವರ್ಷಗಳಿಂದ ವಂಚನೆಯಲ್ಲಿ ತೊಡಗಿದ್ದ ಆರೋಪಿ ಒಂದೇ ದಿನದಲ್ಲಿ ಸಿಸಿಬಿ ಬಲೆಗೆ