ಮೈಸೂರು: ಕಾಂಗ್ರೆಸ್‌ಗೆ ವಿನಾಶ ಕಾಲದಲ್ಲಿ ವಿಪರೀತ ಬುದ್ದಿ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. ಆದರೆ ಅದು ಕನಸು ಕಾಣುತ್ತಿದೆ. ಅಧಿಕಾರಕ್ಕೆ ಬಂದರೆ ಭಜರಂಗದಳ ಬ್ಯಾನ್ ಮಾಡ್ತೀವಿ ಅನ್ನುವುದು ಕಾಂಗ್ರೆಸ್ದು ತಿರುಕನ ಕನಸು ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದರು.
ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ವೀರಶೈವ ಲಿಂಗಾಯತ ಸಮುದಾಯದವರ ಸಭೆಯಲ್ಲಿ ಮಾತನಾಡಿದ ಅವರು, ವೀರಶೈವರು ಸಂಘಟಿತರಾಗಿದ್ದಾರೆ. ಅಧಿಕಾರಕ್ಕೆ ಬಾರದೆ ಇರುವವರು ಏನೇನಾದರು ಕನಸು ಕಾಣಬಹುದು. ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ಬ್ಯಾನ್ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಿದರು.
ನನ್ನೊಂದಿಗೆ ಎಲ್ಲ ಕಾಲದಲ್ಲೂ ವೀರಶೈವ ಸಮುದಾಯ ನಿಂತಿದೆ. ಕರ್ನಾಟಕದಲ್ಲಿ ಬಿಜೆಪಿ ವೀರಶೈವರನ್ನು ಉತ್ತಮವಾಗಿ ನಡೆಸಿಕೊಂಡಿದೆ. ಅನ್ಯಪಕ್ಷಗಳ ಮಾತಿಗೆ, ವದಂತಿಗಳಿಗೆ ವೀರಶೈವ ಸಮಾಜ ಕಿವಿ ಕೊಡಬಾರದು. ಈ ಬಾರಿ ಕೃಷ್ಣರಾಜ ಹಾಗೂ ಚಾಮರಾಜ ಕ್ಷೇತ್ರಗಳಲ್ಲಿ ಸಮುದಾಯದವರು ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.
ಸೋಮಣ್ಣ ಗೆಲ್ಲುವುದು ನಿಶ್ಚಿತ: ವರುಣ ಹಾಗೂ ಚಾಮರಾಜನಗರ ಎರಡು ಕ್ಷೇತ್ರಗಳಲ್ಲೂ ಸೋಮಣ್ಣ ಗೆಲುವು ನಿಶ್ಚಿತ. ವರುಣದಲ್ಲಿ ಸೋಮಣ್ಣ ಗೆದ್ದು ವಿಧಾನ ಸೌಧಕ್ಕೆ ಹೋಗುತ್ತಾರೆ. ಸಿದ್ದರಾಮಯ್ಯ ಸೋತು ಮನೆಗೆ ಹೋಗುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ, ರಾಜ್ಯದಲ್ಲಿ ಬಿಜೆಪಿ ಪರವಾಗಿ ಅಲೆಯಿದೆ. ಬಿಜೆಪಿ 130ರಿಂದ 135 ಸ್ಥಾನ ಗೆದ್ದು, ಸ್ಪಷ್ಟ ಬಹುಮತದಿಂದ ಸರ್ಕಾರ ರಚಿಸುತ್ತೇವೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಪಾಡನ್ನು ನಾವು ಅನುಭವಿಸಿದ್ದೇವೆ, ನೀವು ನೋಡಿದ್ದೀರಿ. ಈ ಬಾರಿ ಅಂತಹ ಪರಿಸ್ಥಿತಿ ಬರುವುದಿಲ್ಲ. ಮೋದಿ, ಅಮಿತ್ ಶಾ ರಾಜ್ಯಕ್ಕೆ ಹೆಚ್ಚು ಬಾರಿ ಆಗಮಿಸಿದ್ದಾರೆ. ಅದರ ಲಾಭ ಬಿಜೆಪಿಗೆ ಆಗಲಿದೆ. ಈ ಬಾರಿ ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ ಎಂದರು.
ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ಹೆಣ್ಣು ಮಗಳು ಜನಿಸಿದ ಕುಟುಂಬದಲ್ಲಿ ಅಳುವ ಪರಿಸ್ಥಿತಿ ಇತ್ತು. ಅದನ್ನು ಮನಗಂಡು ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದೆ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರದ ₹6 ಸಾವಿರ ಜೊತೆ ರಾಜ್ಯದಿಂದ ₹4 ಸಾವಿರ ಸೇರಿಸಿ ರೈತರಿಗೆ ಕೊಟ್ಟಿದ್ದೇನೆ. ರೈತರ ಸಾಲ ಮನ್ನಾ, ಉಚಿತ ವಿದ್ಯುತ್, ರೈತರಿಗೆ ಪ್ರತ್ಯೇಕ ಬಜೆಟ್ ನೀಡಿ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದೇನೆ ಎಂದು ಹೇಳಿದರು.
ಬಡ್ಡಿರಹಿತ ರೈತರಿಗೆ ಸಾಲ ಕೊಡುವ ಪದ್ಧತಿ ಪರಿಚಯಿಸಿದ್ದೇನೆ. ಶೈಕ್ಷಣಿಕ ಅಭಿವೃದ್ಧಿಗಾಗಿ ನಾನಾ ಯೋಜನೆಗಳನ್ನು ಜಾರಿಗೆ ತಂದು ಶ್ರಮಿಸಿದ್ದೇನೆ. ಇಷ್ಟೊಂದು ಜನ ಪರ ಯೋಜನೆಗಳನ್ನು ಕೊಟ್ಟಿರುವ ಬಿಜೆಪಿ ಬಗ್ಗೆ ಕಾಂಗ್ರೆಸ್ನವರು ಇಲ್ಲಸಲ್ಲದ ಮಾತು ಆಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದರು.
ಕೆ.ಆರ್.ಕ್ಷೇತ್ರದ ಅಭ್ಯರ್ಥಿ ಟಿ ಎಸ್ ಶ್ರೀವತ್ಸ, ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ, ವೀರಶೈವ ಸಮುದಾಯದ ಜಿಲ್ಲಾಧ್ಯಕ್ಷ ಕಾನ್ಯ ಶಿವಮೂರ್ತಿ, ಕೆ ಎನ್ ಪುಟ್ಟಬುದ್ದಿ, ಯು ಎಸ್ ಶೇಖರ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರ, ಕಾಪು ಸಿದ್ದಲಿಂಗ ಸ್ವಾಮಿ, ಮಾಜಿ ಮಹಾಪೌರರಾದ ಸುನಂದ ಪಾಲನೇತ್ರ ಹಾಜರಿದ್ದರು.
ಇದನ್ನೂಓದಿ: ನೆಲಕ್ಕೆ ಬಿದ್ದ ಪಕ್ಷದ ಕಾರ್ಯಕರ್ತನ ಊರುಗೋಲು ಎತ್ತಿಕೊಟ್ಟ ಪ್ರಧಾನಿ ಮೋದಿ