ಮೈಸೂರು: ಸಿದ್ದರಾಮಯ್ಯ ಅವರೇ ವಿದೂಷಕರಂತೆ ವರ್ತಿಸಬೇಡಿ, ರಾಜಕೀಯ ಮುತ್ಸದ್ಧಿಯಂತೆ ವರ್ತಿಸಿ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕುಟುಕಿದ್ದಾರೆ.
ನಳಿನ್ ಕುಮಾರ್ ಕಟೀಲ್‌ರನ್ನ 'ಕಾಡು ಮನುಷ್ಯ' ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಸ್ಥಾನದ ವಿದೂಷಕರ ರೀತಿ ವರ್ತಿಸದಿರಿ. ನೀವು ಬಳಸಿರುವ ಭಾಷೆಯನ್ನು ಯಾರೂ ಒಪ್ಪುವುದಿಲ್ಲ. ಇದು ಕಾಡಿನ ಜನರಿಗೆ ಮಾಡಿರುವ ಅವಮಾನ. ಕಾಡಿನ ಜನರನ್ನ ಹೀಯಾಳಿಸಿದ್ದೀರಿ ಎಂದು ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರೇ ನಿಮಗೆ ಏಕವಚನ, ಬಹುವಚನ ಗೊತ್ತಿಲ್ಲ. ಬೇರೆಯವರಿಗೆ ಸಂಧಿ ಪಾಠ ಮಾಡುತ್ತೀರಾ? ಪ್ರಬುದ್ಧ ಅಂತಾ ತೋರಿಸಿಕೊಳ್ಳಲು ಹೋಗಿ ಅಪ್ರಬುದ್ದರಾಗುತ್ತಿದ್ದೀರಾ. ಜನ ನಿಮ್ಮ ತಲೆ ಖಾಲಿಯಾಗಿ ವಿವೇಚನೆ ಇಲ್ಲ ಅಂದುಕೊಳ್ಳುತ್ತಾರೆ ಎಂದು ಎಚ್ ವಿಶ್ವನಾಥ್ ವ್ಯಂಗ್ಯವಾಡಿದ್ರು. ಕಾಡು ಮನುಷ್ಯ ಅಂದ್ರೆ ಅರಣ್ಯ ಸಂರಕ್ಷಕರಿಗೆ ಮಾಡುವ ಅಪಮಾನ. ಈಗ ಎಷ್ಟೋ ಜನ ಕಾಡು ಜನಾಂಗದ ಸರ್ಟಿಫಿಕೇಟ್ ತೆಗೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಒಂದು ಪಕ್ಷದ ರಾಜ್ಯಾಧ್ಯಕ್ಷನನ್ನ ಕಾಡು ಮನುಷ್ಯ ಅನ್ನೋದು ಸರಿಯೇ..? ಸಿದ್ದರಾಮಯ್ಯ ನಿಮ್ಮ ಮಾತಿನ ಮೇಲೆ ಹಿಡಿತ ಇರಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹುಲಿಯಾ, ಕನಕಪುರ ಬಂಡೆ ಇದೆಲ್ಲವು ನಿಮ್ಮ ಬಿರುದುಗಳು. ಇದು ನಿಮ್ಮ ಅಭಿಮಾನಿಗಳು ಕೊಟ್ಟ ಬಿರುದುಗಳು. ಅಭಿಮಾನಿಗಳು ಬಿರುದು ಕೊಟ್ಟಾಗ ಸಂತೋಷಪಟ್ಟಿದ್ದೀರಿ. ಇದೀಗ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯೇ? ಎಂದು ಪ್ರಶ್ನಿಸಿದರು. ನೀವೂ ಒಬ್ಬ ಸ್ಟೇಟ್ಸ್‌ಮ್ಯಾನ್ ಆಗಿ ವರ್ತಿಸುವುದನ್ನು ಕಲಿಯಿರಿ. ನೀವೂ ರಾಜ್ಯದ ಸಿಎಂ ಆಗಿದ್ದವರು, ಇದೀಗ ಪ್ರತಿಪಕ್ಷದ ನಾಯಕರು. ನೀವು ಆಡಿದ ಮಾತನ್ನ ಹಿಂದಕ್ಕೆ ಪಡೆಯಿರಿ ಎಂದು ವಿಶ್ವನಾಥ್ ಒತ್ತಾಯಿಸಿದರು.