ಮೈಸೂರು: ಇಂತಹ ಸರ್ಕಾರವನ್ನು ತಂದಿದ್ದಕ್ಕೆ ವ್ಯಥೆಯಾಗುತ್ತಿದೆ ಮತ್ತು ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ತಮ್ಮ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದರು.
ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಂದಾಲ್ಗೆ ಭೂಮಿ ಪರಭಾರೆಯ ದೃಢೀಕರಣ ಮಾಡುವುದಕ್ಕೆ ನಾಳೆ ಕ್ಯಾಬಿನೆಟ್ ಮುಂದೆ ಬರಬಹುದು. ಆದ್ದರಿಂದ ಇದಕ್ಕೆ ದೃಢೀಕರಣ ಮಾಡುವುದಕ್ಕೆ ಒಪ್ಪಬಾರದು. 3,667 ಎಕರೆ ಭೂಮಿಯನ್ನು ಕಡಿಮೆ ಬೆಲೆಗೆ ಕೊಡುತ್ತಿರುವುದು ಸರಿಯಲ್ಲ. ಹಿಂದೆ ಭೂಮಿ ಕೊಡುವುದಕ್ಕೆ ಬಿಜಿಪಿ ವಿರೋಧಿಸಿತ್ತು. ಈಗ ಇದೇ ಸರ್ಕಾರ ಜಿಂದಾಲ್ಗೆ ಭೂಮಿ ಕೊಡುವುದಕ್ಕೆ ಮುಂದಾಗಿದ್ದು ಸರಿಯಲ್ಲ. ಇಂತ ಸರ್ಕಾರವನ್ನ ತಂದಿದ್ದಕ್ಕೆ ವ್ಯಥೆಯಾಗುತ್ತಿದೆ ಎಂದರು.
ರಾಜ್ಯದಲ್ಲಿ ಜೂನ್ 7ರ ನಂತರವೂ ಒಂದು ತಿಂಗಳು ಲಾಕ್‌ಡೌನ್ ಮುಂದುವರಿಕೆಗೆ ಮಂತ್ರಿಗಳು ಆಸ್ತಕರಾಗಿದ್ದಾರೆ ಎಂಬುವುದು ಸರಿಯಲ್ಲ. ಲಾಕ್‌ಡೌನ್ ಮುಂದುವರೆಸುವುದಾದರೆ 10 ಸಾವಿರ ರೂ. ಸಹಾಯಧನವನ್ನು ಪ್ರತಿ ಕುಟುಂಬಗಳಿಗೆ ಕೊಟ್ಟು ಲಾಕ್‌ಡೌನ್ ಮಾಡಿ. ನಿಮ್ಮ ರಾಜಕೀಯ ಜಂಜಾಟಗಳಿಂದ ಅಧಿಕಾರ ಉಳಿಸಿಕೊಳ್ಳಲು ಲಾಕ್‌ಡೌನ್ ಮಾಡಿ ಜನರನ್ನು ಬಲಿ ಕೊಡಬೇಡಿ. ಈಗಾಗಲೇ ಕೊರೊನಾ ನಿಯಂತ್ರಣಕ್ಕಾಗಿ ಒಂದು ಆರೋಗ್ಯ ಇಲಾಖೆಯನ್ನು 5 ಭಾಗ ಮಾಡಿದ್ಧೀರಿ. ಹೆಣದ ಮೇಲೆ ಹಣ ಮಾಡಬೇಡಿ. ಲಾಕ್‌ಡೌನ್ ಹೆಸರಿನಲ್ಲಿ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸಬೇಡಿ ಎಂದು ಹೆಚ್.ವಿಶ್ವನಾಥ್ ಹೇಳಿದರು.
ಟಾಸ್ಕ್ ಫೋರ್ಸ್ ಏಕೆ ಬೇಕು?:
ಕೋವಿಡ್ ನಿರ್ವಹಣೆಗೆ ಜಿಲ್ಲಾಧಿಕಾರಿಗಳನ್ನು ಬಿಟ್ಟು ಟಾಸ್ಕ್ ಫೋರ್ಸ್ ರಚನೆ ಮಾಡಿರುವುದು ಸರಿಯಲ್ಲ. ಈ ಟಾಸ್ಕ್ ಫೋರ್ಸ್ ವಿಚಾರದಲ್ಲಿ ಮೈಸೂರಿನ ಪಾಲಿಕೆಯ ಆಯುಕ್ತರ ಹೆಗಲ ಮೇಲೆ ಬಂದೂಕು ಇಟ್ಟು ಡಿಸಿಗೆ ಶೂಟ್ ಮಾಡುತ್ತಿದ್ದಾರೆ. ಆ ಮೂಲಕ ಅಧಿಕಾರಿಗಳಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಮೈಸೂರಿನ ಎಂ.ಜಿ. ರಸ್ತೆಯಲ್ಲಿ ಹಳ್ಳಿಯಿಂದ ಜನಸಾಗರವೇ ಮಾರುಕಟ್ಟೆಗೆ ಬರುತ್ತಿದ್ದು, ಇಲ್ಲಿಂದ ಹಳ್ಳಿಗಳಿಗೆ ಕೊರೊನಾ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಜಿಂದಾಲ್ ವಿಚಾರದಲ್ಲಿ ಬಾಯಿ ಬಿಡುತ್ತಿಲ್ಲ. ಏನಾದರೂ ಕಿಕ್ ಬ್ಯಾಕ್ ಪಡೆದಿದೆಯಾ? ಎಂದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಓದಿ: ನಾಳೆ ಸಂಪುಟ ಸಭೆ : ಜಿಂದಾಲ್ಗೆ ಭೂಮಿ ಪರಭಾರೆ ವಿಷಯ ಪ್ರಸ್ತಾಪ ಸಾಧ್ಯತೆ?