ಮೈಸೂರು : ರಾಜ್ಯದ ಚುನಾವಣೆಗೋಸ್ಕರ ಈವರೆಗಿನ ಯಾವೊಬ್ಬ ಪ್ರಧಾನಿಯೂ ಇಷ್ಟೊಂದು ಸಮಯವನ್ನು ಕಳೆದಿಲ್ಲ. ಆದರೆ ಮೋದಿಯವರು ರೆಕಾರ್ಡ್ ಬ್ರೇಕ್ ಮಾಡಿ, ಪ್ರಚಾರ ಕೈಗೊಂಡಿದ್ದಾರೆ. ಮೋದಿಯವರು ರೋಡ್ ಶೋ ನಲ್ಲಿ ಸುಮ್ಮನೆ ಬೀದಿಯಲ್ಲಿ ಕೈ ಬೀಸಿಕೊಂಡು ಹೋಗುತ್ತಿದ್ದಾರೆ. ಇವೆಲ್ಲಾ ಜನರನ್ನು ದಾರಿ ತಪ್ಪಿಸಲು ಮಾಡುತ್ತಿರುವ ತಂತ್ರ. ಬಿಜೆಪಿಯವರು ವೋಟಿಗಾಗಿ ಕಂತೆ ಕಂತೆ ಸುಳ್ಳು ಹೇಳುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಟೀಕಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ನಮಗೆ ದೇಶದ ಪ್ರಧಾನಿ ಬಗ್ಗೆ ಅಪಾರ ಗೌರವ ಇದೆ. ದೇಶದ ಪ್ರಧಾನಿ ದೇಶದ ಸಮಸ್ಯೆಗಳನ್ನು ಬದಿಗೊತ್ತಿ ಚುನಾವಣಾ ಪ್ರಚಾರಕ್ಕೆ ಆದ್ಯತೆ ನೀಡಿದ್ದು, ಸರಿಯಲ್ಲ. ಮೋದಿ ಅವರು ರೋಡ್ ಶೋನಲ್ಲಿ ಎಷ್ಟೇ ಅಬ್ಬರಿಸಿ ಬೊಬ್ಬಿರಿದರು ಏನೂ ಪ್ರಯೋಜನ ಇಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ನಾಯಕರು ವ್ಯಾಪಕ ಭ್ರಷ್ಟಾಚಾರ ಮಾಡಿದ್ದಾರೆ. ಹೀಗಾಗಿ ಅವರು ಜನರ ಮುಂದೆ ಮತ ಕೇಳಲು ಬರುತ್ತಿಲ್ಲ. ಆದ್ದರಿಂದ ಪಕ್ಷದ ಪರವಾಗಿ ಮೋದಿ ಪ್ರಚಾರಕ್ಕೆ ಹೆಚ್ಚು ಹಣ ಖರ್ಚು ಮಾಡಿದರೂ ನಿರೀಕ್ಷಿತ ಜನ ರೋಡ್ ಶೋಗೆ ಸೇರಲಿಲ್ಲ. ಮೋದಿಯವರ ರೋಡ್ ಶೋಗಳಿಂದ ಜನರಿಗಿದ್ದ ಅವರ ಮೇಲಿನ ಅಭಿಮಾನ ಕಡಿಮೆಯಾಗಿದ್ದು, ಬಿಜೆಪಿಯ ಮತಗಳಿಕೆ ಕಡಿಮೆಯಾಗಲಿದೆ ಎಂದು ಹೆಚ್ ವಿಶ್ವನಾಥ್ ಭವಿಷ್ಯ ನುಡಿದರು.
ಕಾಂಗ್ರೆಸ್ಗೆ ಬಹುಮತ : ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಅವರನ್ನು ಸೋಲಿಸಬೇಕೆಂಬ ಬಿಜೆಪಿ ತಂತ್ರ ಫಲಿಸುವುದಿಲ್ಲ. ಈ ಇಬ್ಬರು ನಾಯಕರು ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುತ್ತಾರೆ ಎಂದ ವಿಶ್ವನಾಥ್, ಬಿಜೆಪಿಗೆ ವೋಟು ಹಾಕದಿದ್ದರೆ ಕೇಂದ್ರದ ಯೋಜನೆಗಳು ಸ್ಥಗಿತವಾಗಲಿವೆ ಎಂಬ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಹೇಳಿಕೆ ಬೆದರಿಕೆಯಂತಿದೆ. ಜೊತೆಗೆ ಕಾಂಗ್ರೆಸ್ಗೆ ವೋಟು ಹಾಕಿದರೆ ದಂಗೆ ಆಗಲಿದೆ ಎಂಬ ಕೇಂದ್ರ ಗೃಹ ಸಚಿವರ ಹೇಳಿಕೆ ಬೇಜವಾಬ್ದಾರಿಯುತವಾಗಿ ಕೂಡಿದೆ ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಸುಳ್ಳುಗಾರ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಹಾ ಸುಳ್ಳುಗಾರ. ಕಾಂಗ್ರೆಸ್ ಮಾಡಿದ್ದ ಸಾಲವನ್ನು ನಾವು ತೀರಿಸುತ್ತಿದ್ದೇವೆ ಎಂಬ ಸಿಎಂ ಹೇಳಿಕೆ ಸುಳ್ಳು. ಕಾಂಗ್ರೆಸ್ ಸರ್ಕಾರ ಇದ್ದ ಕಾಲದಲ್ಲಿ ಎಷ್ಟು ಸಾಲ ಇತ್ತು. ನಿಮ್ಮ ಆಡಳಿತ ಕಾಲದಲ್ಲಿ ಎಷ್ಟು ಸಾಲ ಇದೆ ಎಂಬುದನ್ನು ಜನರಿಗೆ ತಿಳಿಸಿ. ಬರೀ ಸುಳ್ಳನ್ನು ಹೇಳಬೇಡಿ. ಬಿಜೆಪಿಯವರು ಕರ್ನಾಟಕವನ್ನು ಉತ್ತರದವರಿಗೆ ಮಾರಲು ಸಿದ್ಧರಾಗಿದ್ದಾರೆ. ಇದನ್ನು ತಡೆಯಲು ಕಾಂಗ್ರೆಸ್ ಮುಂದಾಗಿದೆ. ಡಬಲ್ ಇಂಜಿನ್ ಸರ್ಕಾರದಿಂದ ಯಾವುದೇ ಪ್ರಯೋಜನ ಇಲ್ಲ. ಬಿಜೆಪಿ ವೋಟಿಗಾಗಿ ಸುಳ್ಳು ಹೇಳುತ್ತಿದೆ ಎಂದು ವಿಶ್ವನಾಥ್ ಆರೋಪಿಸಿದರು.
ಸಂಸದರ ಆರೋಪಕ್ಕೆ ನಾನು ಬದ್ಧ: ಸಂಸದ ಪ್ರತಾಪ್ ಸಿಂಹ ವಿರುದ್ಧ ನಾನು ಮಾಡಿರುವ ಸಿಡಿ ಆರೋಪಕ್ಕೆ ನಾನು ಬದ್ಧನಾಗಿದ್ದು, ನಾನು ಸುಳ್ಳು ಆರೋಪಗಳನ್ನು ಮಾಡಿಲ್ಲ. ಮುಂದೆ ಪಾರ್ಲಿಮೆಂಟ್ ಚುನಾವಣೆ ಬಂದಾಗ ಬಹಿರಂಗ ಪಡಿಸುತ್ತೇನೆ. ಈ ಬಗ್ಗೆ ಸ್ಟೇ ತಂದಿದ್ದರೂ, ಅದನ್ನು ಕಾನೂನಿನ ಮೂಲಕವೇ ತೆರವುಗೊಳಿಸಲು ಅವಕಾಶ ಇದೆ. ಅದನ್ನು ನಾನು ಮಾಡುತ್ತೇನೆ. ಮುಂದಿನ ಪಾರ್ಲಿಮೆಂಟ್ ಚುನಾವಣಾ ಸಂದರ್ಭಕ್ಕೆ ನಾನು ಮಾಡಿದ ಆರೋಪಕ್ಕೆ ಸಂಸದರ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಿಶ್ವನಾಥ್ ಹರಿಹಾಯ್ದರು.
ಇದನ್ನೂ ಓದಿ : ಬಿಜೆಪಿಯಿಂದ ದ್ವೇಷ ರಾಜಕಾರಣ: ಸಿದ್ದರಾಮಯ್ಯ