ಮೈಸೂರು : ಜನಪ್ರತಿನಿಧಿಗಳ ಮಾತಿಗೆ ಬೆಲೆ ಕೊಡದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡನೆ ಮಾಡುತ್ತೇವೆ ಎಂದು ಶಾಸಕ ಸಾ ರಾ ಮಹೇಶ್ ಹೇಳಿದ್ದಾರೆ.
ಅಲ್ಲದೆ ಹಿಂದಿನ ಜಿಲ್ಲಾಧಿಕಾರಿ ವರ್ಗಾವಣೆ ಮಾಡಿಸಿ ಬಂದ ಇವರು ಇದನ್ನು ಸಿಎಟಿಯಲ್ಲಿ ಪ್ರಶ್ನಿಸಿದ್ದ ವಿಚಾರ ವಿಳಂಬವಾಗುತ್ತಿದೆ. ಇದಕ್ಕೆ ಎರಡು ಬಾರಿ ಅಡ್ವೋಕೇಟ್ ಜನರಲ್ ಸಿಎಟಿ ಮುಂದೆ ಗೈರಾಗಿದ್ದು , ನಂತರ ಮೂರನೇ ಬಾರಿ 10 ದಿನ ರಜೆ ಹಾಕಿದ್ದಾರೆ.
ಇವೆಲ್ಲಾ ನೋಡಿದರೆ ಇದರ ಹಿಂದೆ ಯಾರೋ ಇದ್ದಾರೆ ಎಂಬ ಬಗ್ಗೆ ಅನುಮಾನ ಮೂಡುತ್ತದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ದಾಖಲಾತಿಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.
ಜೊತೆಗೆ ದಸರಾ ಸಂದರ್ಭದಲ್ಲಿ ಚಿನ್ನದ ಅಂಬಾರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಮಹಾರಾಜರನ್ನು ಪಕ್ಕಕ್ಕೆ ಸರಿಸಿ ಮುಂದೆ ಹೋಗಿ ನಿಂತು ಪುಷ್ಪಾರ್ಚನೆ ಮಾಡಿದ ಜಿಲ್ಲಾಧಿಕಾರಿ ವರ್ತನೆಯನ್ನು ಶಾಸಕ ಮಂಜುನಾಥ್ ಮಹಾರಾಣಿಗೆ ಹೋಲಿಸಿದ್ದಾರೆ ಎಂದ್ರು.
ಈಗಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಪ್ರಚಾರದ ಹುಚ್ಚು ಇದ್ದರೆ ರಾಜೀನಾಮೆ ಕೊಟ್ಟು ಮೈಸೂರು ಜಿಲ್ಲೆಯ ಒಂದು ಕ್ಷೇತ್ರದಿಂದ ಚುನಾವಣೆಗೆ ನಿಂತುಕೊಳ್ಳಿ ಎಂದು ಜಿಲ್ಲಾಧಿಕಾರಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ರು. ಸ್ಥಳೀಯ ಶಾಸಕರ ಗಮನಕ್ಕೆ ತರದೆ ಕೆಡಿಪಿ ಸಭೆಗಳ ದಿನಾಂಕವನ್ನು ನಿಗದಿ ಮಾಡುತ್ತಿದ್ದು, ಇದರ ವಿರುದ್ಧ ಮುಂದಿನ ವಿಧಾನಸಭೆಯಲ್ಲಿ ಮಾತನಾಡುತ್ತೇನೆ ಎಂದರು.
ಪೊಲೀಸರ ಮೂಲಕ ವಸೂಲಿಗಿಳಿದ ಸರ್ಕಾರ : ಪ್ರತಿ ತಾಲೂಕಿನಲ್ಲಿ ಕೇಂದ್ರಗಳಲ್ಲಿ ರಸ್ತೆ ರಸ್ತೆಗಳಲ್ಲಿ ವಾಹನ ತಪಾಸಣೆ, ಮಾಸ್ಕ್ ಇಲ್ಲದವರಿಗೆ ಫೈನ್ ಹಾಕುವ ಬಗ್ಗೆ ಸರ್ಕಾರ ಪೊಲೀಸರಿಗೆ ಟಾರ್ಗೆಟ್ ನೀಡಿದೆ. ಆದ್ರೆ, ಕೂಲಿ ಕೆಲಸ ಮಾಡುವವರಿಗೂ 500 ರೂ. ದಂಡ ವಿಧಿಸುತ್ತಿದ್ದಾರೆ.
ಕೊರೊನಾದಿಂದ ಜನರು ಈಗಾಗಲೇ ನೊಂದಿದ್ದಾರೆ, ಈ ಸಂದರ್ಭದಲ್ಲಿ ಟಾರ್ಗೆಟ್ ನೀಡಿ ರೋಲ್ ಕಾಲ್ ಮಾಡುವ ಪದವಿಯನ್ನು ಗೃಹ ಸಚಿವರು ಹಾಗೂ ಐಜಿಪಿ ಅವರು ಶೀಘ್ರವೇ ನಿಲ್ಲಿಸಬೇಕು ಎಂದ್ರು.
ಇದೇ ವೇಳೆ ಸಾ ರಾ ಮಹೇಶ್ ಮೈಸೂರು ರೇಸ್‌ಕೋರ್ಸ್ ವಿಚಾರದಲ್ಲಿ ಹೋರಾಟ ಮುಂದುವರೆಸುವುದಾಗಿ ಹೇಳಿದರು. ಕಷ್ಟ ಪಟ್ಟು ಸಿಎಂ ಆದ ಯಡಿಯೂರಪ್ಪನವರು ನೆಮ್ಮದಿಯಾಗಿ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ಹಿಂದೆ ಹೇಳಿದ್ದೆ. ಅದು ಈಗ ನಿಜವಾಗುತ್ತಿದೆ ಎಂದು ಕುಟುಕಿದರು.