ಮೈಸೂರು: ಹುಣಸೂರು ಕ್ಷೇತ್ರದಲ್ಲಿ ಉಪ ಚುನಾವಣೆ ಬರಲಿ. ಅಲ್ಲಿ ಜೆಡಿಎಸ್ ಗೆಲ್ಲುತ್ತೊ ಇಲ್ಲ, ಕಾಂಗ್ರೆಸ್ ಗೆಲ್ಲುತ್ತಾ ಎಂಬುದನ್ನು ಕಾದು ನೋಡೋಣವೆಂದು ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಜಿ.ಟಿ.ಡಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಹುಣಸೂರಿನಿಂದ ತಮ್ಮ ಪುತ್ರನನ್ನು ಜೆಡಿಎಸ್ನಿಂದ ಕಣಕ್ಕಿಳಿಸುವುದಿಲ್ಲ ಎಂದು ಜಿಟಿಡಿ ನಿನ್ನೆ ಹೇಳಿಕೆ ನೀಡಿದ್ದರು. ಇದಕ್ಕೆ ಇಂದು ಮಾಜಿ ಸಚಿವ ಸಾ ರಾ ಮಹೇಶ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ಜೆಡಿಎಸ್ ಕಾರ್ಯಕಾರಣಿ ಸಭೆಗೆ ಜಿ.ಟಿ. ದೇವೇಗೌಡ ಅವರನ್ನು ರಾಷ್ಟ್ರೀಯ ನಾಯಕರೇ ಫೋನ್ ಮಾಡಿ ಸಭೆಗೆ ಬರುವಂತೆ ತಿಳಿಸಿದ್ದಾರೆ. ಆದರೆ ಅವರು ಕೆಲಸವಿದ್ದ ಕಾರಣ ಬರುವುದಿಲ್ಲ ಎಂದು ಹೇಳಿದರು. ಇತ್ತೀಚಿಗೆ ಜಿ.ಟಿ.ಡಿ. ಜೆಡಿಎಸ್ನಿಂದ ದೂರವಾಗುತ್ತಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿ, ಹಾಗೇನಿಲ್ಲ. ಅವರಿಗೆ ಸ್ವಲ್ಪ ಬೇಸರವಿದ್ದು, ಅದನ್ನು ಸರಿ ಪಡಿಸುತ್ತೇವೆ. ನಮ್ಮ ಪಕ್ಷದಲ್ಲಿ ಟಿವಿ, ಪೇಪರ್, ಸಭೆಗಳಲ್ಲಿ ಮುಕ್ತವಾಗಿ ಹೇಳಿಕೆ ನೀಡಲು ನಮಗೆ ಸ್ವಾತಂತ್ರ್ಯ ಇದೆ ಎಂದರು.
ಇನ್ನು, ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿರುವುದು ಸರಿ. ಆದರೆ ಆಪರೇಷನ್ ಕಮಲದ ಸಂದರ್ಭದಲ್ಲಿ ನಡೆದ ಸಂಭಾಷಣೆಯನ್ನು ಸಹ ತನಿಖೆ ಮಾಡಲಿ. ಆಗ ನಿಜ ಹೊರಬರುತ್ತದೆ ಎಂದ ಸಾ.ರಾ.ಮಹೇಶ್, ಕದ್ದಾಲಿಕೆಯ ಕುರಿತು ವಿಷಯಾಧಾರಿತವಾಗಿ ತನಿಖೆಯಾಗಲಿ ಎಂದು ಆಗ್ರಹಿಸಿದರು.