ಮೈಸೂರು: ದಸರಾ ಸಂದರ್ಭದಲ್ಲಿ ಕೇವಲ 29 ದಿನಕ್ಕೆ ಜಿಲ್ಲಾಧಿಕಾರಿ ಬಿ.ಶರತ್ ವರ್ಗಾವಣೆ ಮಾಡಿರುವುದು ಸರ್ಕಾರದ ಸಾಧನೆ ಎಂದು ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಡಿದ್ದಾರೆ.
ನಿನ್ನೆ ರಾತ್ರಿ ದಿಢೀರ್ ಆಗಿ ಮೈಸೂರು ಜಿಲ್ಲಾಧಿಕಾರಿ ಬಿ.ಶರತ್ ವರ್ಗಾವಣೆ ಮಾಡಿ ಅವರಿಗೆ ಸ್ಥಳ ಸಹ ತೋರಿಸದೆ ಇರುವುದು ಈ ರಾಜ್ಯ ಸರ್ಕಾರದ ಸಾಧನೆ. ದಸರಾದ ವಿಶೇಷ ಅಧಿಕಾರಿಯಾಗಿದ್ದು, ಇತಂಹ ಸಂದರ್ಭದಲ್ಲಿ ಇವರ ವರ್ಗಾವಣೆ ಸರಿಯಲ್ಲ ಎಂದರು.
ನೂತನವಾಗಿ ವರ್ಗವಾಗಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಸನ ಜಿಲ್ಲಾಧಿಕಾರಿಯಾಗಿದ್ದಾಗ 3 ಬಾರಿ ರಾಜ್ಯ ಸರ್ಕಾರದ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದರು. ಜೊತೆಗೆ ಹಾಸನದಲ್ಲಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ವರ್ಗವಾದರೂ ಬೇರೆ ಕಡೆ ಹೋಗದೆ ಅಧಿಕೃತ ನಿವಾಸವನ್ನು ಖಾಲಿ ಮಾಡದೆ ಇದ್ದ ಜಿಲ್ಲಾಧಿಕಾರಿಗಳನ್ನು ಮೈಸೂರಿಗೆ ವರ್ಗ ಮಾಡಿದ್ದೀರಿ. ಒಬ್ಬ ಆಂಧ್ರದ ಹೆಣ್ಣುಮಗಳಿಗೋಸ್ಕರ ಕನ್ನಡದ ದಲಿತ ಜಿಲ್ಲಾಧಿಕಾರಿಯನ್ನು 29 ದಿವಸಕ್ಕೆ ಸ್ಥಳ ತೋರಿಸದೆ ವರ್ಗಾವಣೆ ಮಾಡಿರುವುದು ಈ ರಾಜ್ಯ ಸರ್ಕಾರದ ಸಾಧನೆ ಎಂದರು.
ರಾಜ್ಯದಲ್ಲಿ ಯಡಿಯೂರಪ್ಪನವರು ಅಧಿಕಾರ ನಡೆಸುತ್ತಿದ್ದಾರಾ ಅಥವಾ ಬೇರೆ ಸಿಎಂ ಅಧಿಕಾರ ನಡೆಸುತ್ತಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಇನ್ನು ಜಿಲ್ಲಾಧಿಕಾರಿ ಬಿ.ಶರತ್ ಅವರನ್ನ 29 ದಿನಕ್ಕೆ ವರ್ಗಾವಣೆ ಮಾಡಿ ಅವರಿಗೆ ಯಾವುದೇ ಸ್ಥಳ ತೋರಿಸದೆ ಇರುವುದು ಕರ್ನಾಟಕದಲ್ಲಿ ಐಎಎಸ್ ಮಾಡಿದವರಿಗೆ ಅವಮಾನ ಎಂದರು. ಬಿ.ಶರತ್ ಅವರು ವರ್ಗಾವಣೆ ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗಲಿ ಎಂದು ಸಲಹೆ ನೀಡಿದರು.