ಮೈಸೂರು: ಗಜಪಡೆಯ ಸ್ವಾಗತಕ್ಕೆ ಶಾಸಕ ರಾಮದಾಸ್ ಗೈರಾಗಿರುವ ಕುರಿತು ಪ್ರತಿಕ್ರಿಯೆ ನೀಡಿದ ಉಸ್ತುವಾರಿ ಸಚಿವ ವಿ. ಸೋಮಣ್ಣ ನಾನು ರಾಮದಾಸ್ ಅವರನ್ನು ಭೇಟಿ ಮಾಡುತ್ತೇನೆ. ಅವರ ಜೊತೆ ಮಾತುಕತೆ ನಡೆಸುತ್ತೇನೆ. ಎಲ್ಲವೂ ಸುಖಾಂತ್ಯವಾಗಿ, ದಸರಾ ತುಂಬಾ ಚೆನ್ನಾಗಿ ನಡೆಯುತ್ತದೆ ಎಂದು ಹೇಳಿದ್ದಾರೆ.
ಗಜ ಪಡೆಯನ್ನು ಅರಮನೆಗೆ ಸ್ವಾಗತಿಸುವ ಕಾರ್ಯಕ್ರಮದಲ್ಲಿ ಶಾಸಕ ಎಸ್.ಎ.ರಾಮದಾಸ್ ಹಾಗೂ ಕಾಂಗ್ರೆಸ್ ಜೆಡಿಎಸ್ನ ಎಲ್ಲಾ ಶಾಸಕರು ಗೈರಾಗಿದ್ದರು. ಈ ಬಗ್ಗೆ ಉಸ್ತುವಾರಿ ಸಚಿವರಾದ ವಿ. ಸೋಮಣ್ಣ ಅವರನ್ನು ಮಾಧ್ಯಮದವರು ಪ್ರಶ್ನೆ ಮಾಡಿದಾಗ ನಾನು ಖುದ್ದಾಗಿ ರಾಮದಾಸ್ ಅವರನ್ನು ಭೇಟಿ ಮಾಡುತ್ತೇನೆ. ಮೊನ್ನೆ ಮತ್ತು ಇಂದು ಬೆಳಗ್ಗೆ ಕರೆ ಮಾತನಾಡಿದಾಗ ಅವರು ಸ್ವೀಕರಿಸಲಿಲ್ಲ. ಇದೊಂದು ಸಾಂಪ್ರದಾಯಿಕ ಕಾರ್ಯಕ್ರಮ ವರ್ಷಕ್ಕೆ ಒಂದು ಬಾರಿ ಮಾತ್ರ ಬರುತ್ತದೆ. ಅವರ ಮನಸ್ಸನ್ನು ಗೆಲ್ಲುವ ಕೆಲಸ ಮಾಡುತ್ತೇನೆ, ಎಲ್ಲವೂ ಸುಖಾಂತ್ಯವಾಗುತ್ತದೆ ಎಂದರು.
ಸಚಿವ ಸ್ಥಾನದ ಕುರಿತು ಮಾತನಾಡಿದ ಅವರು ಯಡಿಯೂರಪ್ಪ ಅವರು ಯಾವ ಖಾತೆ ನೀಡಿದರೂ ಅದನ್ನು ನಿಭಾಯಿಸುತ್ತೇನೆ. ಡಿಸಿಎಂ ಹುದ್ದೆ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದರು. ನೂರಾರು ವರ್ಷ ಇತಿಹಾಸ ಇರುವ ದಸರಾವನ್ನು ಎಲ್ಲ ರೀತಿಯ ಧಾರ್ಮಿಕ ಸಂಪ್ರದಾಯದಂತೆ ನಡೆಸುತ್ತೇವೆ. ಸಾಂಪ್ರದಾಯಿಕ ದಸರಾದ ಹಿನ್ನೆಲೆಯಲ್ಲಿ ಇಂದು ಗಜ ಪಡೆಯನ್ನು ಸ್ವಾಗತ ಮಾಡಲಾಗಿದ್ದು, ಉಳಿದ ಎಲ್ಲ ದಿನಗಳಲ್ಲಿ ದಸರಾವನ್ನು ವ್ಯವಸ್ಥಿತವಾಗಿ ನಡೆಸಲು ಈಗಾಗಲೇ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗಲು ತೀರ್ಮಾನಿಸಿದ್ದೇವೆ ಎಂದರು.