ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ಮಾಸುವ ಮುನ್ನವೇ ಮೈಸೂರಿನಲ್ಲಿ ಅಪ್ರಾಪ್ತೆ ಮೇಲೆ ಬಿಹಾರ ಮೂಲದ ಕಾರ್ಮಿಕನೊಬ್ಬ ಲೈಂಗಿಕ ಕಿರುಕುಳ ಎಸಗಿರುವ ಪ್ರಕರಣ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಟಿ. ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ ಗ್ರಾಮದ ಫಾರ್ಮ್ಹೌಸ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಶಿವಮೊಗ್ಗದ ದಂಪತಿಯ 10 ವರ್ಷದ ಮಗಳನ್ನು ಅದೇ ಫಾರ್ಮ್ಹೌಸ್ನಲ್ಲಿ ಕೆಲಸ ಮಾಡುವ ನಿಜಾಮ್ ಎಂಬಾತ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ.
ನಿಜಾಮ್ ಕುದುರೆಗಳಿಗೆ ಲಾಳ ಹೊಡೆಯುವ ಕೆಲಸ ಮಾಡಿಕೊಂಡಿದ್ದು, ಅದೇ ಫಾರ್ಮ್ಹೌಸ್ನಲ್ಲಿ ಪ್ರತ್ಯೇಕ ರೂಮಿನಲ್ಲಿದ್ದ. ಈತ ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ 10 ವರ್ಷದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಘಟನೆ ನಡೆದ ಮೂರು ದಿನಗಳ ನಂತರ ಬಾಲಕಿ ತನ್ನ ತಾಯಿಗೆ ಈ ಬಗ್ಗೆ ಹೇಳಿಕೊಂಡಿದ್ದಾಳೆ.
ಆರೋಪಿ ನಿಜಾಮನು ಅಪ್ರಾಪ್ತೆಗೆ 3-4 ಬಾರಿ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನ್ನು ಸಹ ಬಾಲಕಿ ತಾಯಿಯ ಬಳಿ ತಿಳಿಸಿದ್ದಾಳೆ.
ಈ ವಿಷಯ ಕೇಳಿ ಅಘಾತಗೊಂಡ ತಾಯಿ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿ ನಿಜಾಮ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನು ಓದಿ:ದೇಗುಲ ಧ್ವಂಸದ ವಿರುದ್ಧ ಪ್ರತಿಭಟಿಸುವವರು ಹಿಂದೂ ತಾಲಿಬಾನಿಗಳು : ಪ್ರೊ. ಮಹೇಶ್ ಚಂದ್ರ ಗುರು