ಮೈಸೂರು : ರಾಜ್ಯದ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಳಿದರೆ ಹೇಳುತ್ತಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ನಗರದ ಚಾಮರಾಜೇಂದ್ರ ಮೃಗಾಲಯದಲ್ಲಿ ಮೂರು ಹುಲಿ ಮರಿಗಳನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಿ ಬಳಿಕ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಬಗ್ಗೆ ನನ್ನನ್ನು ಕೇಳಿದರೆ ಹೇಗೆ, ಈ ಬಗ್ಗೆ ಸಿಎಂ ಬಳಿ ಕೇಳಿ ಅಥವಾ ಶಾಸಕ ರಾಮದಾಸ್ ಅವರನ್ನು ಕೇಳಿ ಎಂದು ಹಾಸ್ಯಚಟಾಕಿ ಸಿಡಿಸಿದರು.
ಮೈಸೂರು ಮೃಗಾಲಯ ಯಾವಾಗಲೂ ಪ್ರವಾಸಿಗರಿಗೆ ಹೊಸದನ್ನು ತೋರಿಸುವ ಆಕರ್ಷಕ ಮೃಗಾಲಯವಾಗಿದೆ. ಇಲ್ಲಿ ರಾಕಿ ಹಾಗೂ ಬಿಳಿ ಹೆಣ್ಣು ಹುಲಿಗೆ ಮೂರು ಹುಲಿ ಮರಿಗಳು ಜನಿಸಿದ್ದು, ಅದರಲ್ಲಿ ಎರಡು ಹೆಣ್ಣು ಹಾಗೂ ಒಂದು ಗಂಡು ಮರಿ ಸಾಮಾನ್ಯ ಹುಲಿ ಮರಿಗಳಂತೆ ಜನಿಸಿದೆ. ಇವುಗಳನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ ಎಂದು ಹೇಳಿದರು.
ಕೋವಿಡ್ ವಿಚಾರವಾಗಿ ಮಾತನಾಡಿದ ಅವರು, ಮೈಸೂರಿನಲ್ಲಿ ಕೋವಿಡ್ ಸಂಬಂಧ ಜಿಲ್ಲಾಧಿಕಾರಿಗಳು ಸಭೆ ನಡೆಸಿದ್ದಾರೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳುವಂತೆ ಹೇಳಲಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದರು. ಮೈಸೂರು ಮೃಗಾಲಯದಲ್ಲಿ ಕಳೆದ ಕೋವಿಡ್ ಸಂದರ್ಭದಲ್ಲಿ ಸಮಸ್ಯೆ ಇತ್ತು. ಈಗ ಮೃಗಾಲಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಪ್ರಾಣಿಗಳನ್ನು ದತ್ತು ಪಡೆದವರು ಪುನಃ ನವೀಕರಿಸುವಂತೆ ಮೃಗಾಲಯದ ವತಿಯಿಂದ ಮನವಿ ಮಾಡಲಾಗಿದೆ. ಇದಕ್ಕೆ ದಾನಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದರು. ಇದರ ಜೊತೆ ಈ ಮಾರ್ಚ್ ಒಳಗೆ ಸಹಕಾರಿ ಕ್ಷೇತ್ರದಲ್ಲಿ 24 ಸಾವಿರ ಕೋಟಿ ಸಾಲವನ್ನು 33 ಲಕ್ಷ ಜನರಿಗೆ ಕೊಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ಇದನ್ನೂ ಓದಿ : ನೂತನ ಜಿಲ್ಲಾಧಿಕಾರಿಗಳಿಗೆ ಇಗೋ ಇಲ್ಲ : ನಿರ್ಗಮಿತ ಡಿಸಿಗೆ ಟಾಂಗ್ ಕೊಟ್ಟ ಸಚಿವ ಎಸ್ ಟಿ ಸೋಮಶೇಖರ್