ಮೈಸೂರು: ನಮ್ಮನ್ನ ಖರೀದಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾವು ಖರೀದಿ ವಸ್ತಿಗಳಲ್ಲ ಎಂದು ಸಚಿವ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇಂದು ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಗೆ ಹೋದವರು ಖರೀದಿಗೆ ಹೋಗಿದ್ದಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ತಿರುಗೇಟು ನೀಡಿದ ಸಚಿವರು ನಮ್ಮನ್ನ ಖರೀದಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ನಾನೇ ಎಲ್ಲರನ್ನೂ ಬಾಂಬೆಗೆ ಕರೆದುಕೊಂಡು ಹೋಗಿ ಇಟ್ಟಿದ್ದೆ. ಕಾಂಗ್ರೆಸ್ ನವರು ಸುಮ್ಮನೆ ಇದ್ದರೆ ಸರಿ ಇಲ್ಲ ಅಂದರೆ ಅವರ ವಿಚಾರ ಸಹ ಗೊತ್ತು ಎಂದು ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಇದೇ ವೇಳೆ, ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ 1,322 ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ತಿಳಿಸಿದರು.
ಮೇಯರ್ ಚುನಾವಣೆ ವಿಚಾರ
ಮೇಯರ್ ಚುನಾವಣೆ ವಿಚಾರ ನನ್ನ ಬಳಿಗೆ ಇನ್ನೂ ಬಂದಿಲ್ಲ. ನಿನ್ನೆ ಪಾಲಿಕೆ ಸದಸ್ಯರ ಸಭೆ ಮಾಡಿದ್ದು, ಚುನಾವಣೆ ವಿಚಾರವಾಗಿ ಅಲ್ಲ. 11ನೇ ತಾರೀಖು ಮುಖ್ಯಮಂತ್ರಿಗಳು ಬರ್ತಾ ಇರೋ ಹಿನ್ನಲೆ ಜನಸೇವಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಸಭೆ ಮಾಡಿದ್ದೇವೆ ಅಷ್ಟೇ. ಈ ಬಗ್ಗೆ ಸ್ಥಳೀಯ ನಾಯಕರು ತೀರ್ಮಾನ ಮಾಡುತ್ತಾರೆ ಎಂದರು.
ಸೋಮವಾರದಿಂದ ಲಸಿಕೆ
ಸೋಮವಾರದಿಂದ ಲಸಿಕೆ ನೀಡಲಿದ್ದೇವೆ. ರಾಜ್ಯದ 5 ಕೇಂದ್ರಗಳಲ್ಲಿ ಮೈಸೂರು ಸಹ ಒಂದು. ಮೈಸೂರಿನಲ್ಲೂ ಲಸಿಕೆ ವಿತರಣೆಯಾಗಲಿದೆ. ಆಶಾ ಕಾರ್ಯಕರ್ತರು, ವೈದ್ಯರು ಸೇರಿದಂತೆ ಫ್ರಂಟ್ ಲೈನ್ ವಾರಿಯರ್ಸ್ಗೆ ಲಸಿಕೆ ವಿತರಣೆ ಮಾಡಲಿದ್ದೇವೆ. ಇದೇ ವಿಚಾರವಾಗಿ ಅಧಿಕಾರಿಗಳ ಸಭೆ ಕರೆದಿದ್ದೇನೆ. ಸಭೆಯಲ್ಲಿ ಸಿದ್ದತೆ ಕುರಿತು ಮಾಹಿತಿ ಪಡೆಯುವುದಾಗಿ ತಿಳಿಸಿದರು.
ಓದಿ...ಕೋವಿಡ್ ವ್ಯಾಕ್ಸಿನ್ ಯಾವಾಗ ಲಭ್ಯ ಅನ್ನೋ ಪ್ರಶ್ನೆಗೆ ಮೋದಿ ಉತ್ತರ ಕೊಡ್ತಾರೆ: ಸುಧಾಕರ್
ಮುಡಾದ ಹಗರಣಗಳಲ್ಲಿ ಭಾಗಿಯಾದವರು ಎಷ್ಟೇ ದೊಡ್ಡವರಾದ್ರೂ ಕ್ರಮ ಕೈಗೊಳ್ಳತ್ತೇವೆ. ಹಗರಣದಲ್ಲಿ ಯಾರೇ ಭಾಗಿಯಾಗಿದ್ದರು ಅಂತಹವರ ವಿರುದ್ದ ಕ್ರಮ ಕೈಗೊಳ್ಳೊದು 100% ಸತ್ಯ. ಜಾಗೃತಿ ದಳ, ಡಿವೈಎಸ್ಪಿ ಹಂತವನ್ನ ಮುಡಾಗೆ ತರುವಂತೆ ಮುಡಾ ಅಧ್ಯಕ್ಷರ ಜೊತೆ ಗೃಹ ಸಚಿವರಿಗೆ ಜಂಟಿಯಾಗಿ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮನವಿ ಮಾಡಿದ್ದೇವೆ ಎಂದರು.
ಅಲ್ಲದೇ ನಿನ್ನೆ ರಾತ್ರಿ ಪೊಲೀಸ್ ಕಮಿಷನರ್ ಭೇಟಿ ಮಾಡಿ ಮಾತನಾಡಿದ್ದೇವೆ. ತಪ್ಪಿತಸ್ಥರು ಯಾರಿದ್ದಾರೆ, ಎಷ್ಟೇ ದೊಡ್ಡವರು ಆಗಿರಲಿ, ಯಾವುದೇ ಬ್ಯಾಗ್ರೌಂಡ್ ಇದ್ರೂ ಅಂತಹವರನ್ನ ಅರೆಸ್ಟ್ ಮಾಡಿ. ಹಗರಣಕ್ಕೆ ಸಂಬಂಧಪಟ್ಟಂತೆ ಯಾರೇ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಪೋರ್ಟ್ ಮಾಡಿದ್ರೂ ಅಂತವರ ವಿರುದ್ದ ಕ್ರಮಕ್ಕೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.