ಮೈಸೂರು: ರಾಜ್ಯ ಸರ್ಕಾರ ಕೊರೊನಾ ರೋಗಿಗಳಿಗಾಗಿ ಖರ್ಚು ಮಾಡುತ್ತಿರುವ ಲೆಕ್ಕವನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆ ಬಾಗಿಲಿಗೆ ಕಳುಹಿಸುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿ ಸರ್ಕಾರಕ್ಕ ಲೆಕ್ಕ ಕೊಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೊರೊನಾ ಸಂದರ್ಭದಲ್ಲಿ ಕಾಂಗ್ರೆಸ್ ಅನಗತ್ಯ ರಾಜಕೀಯ ಮಾಡುತ್ತಿದೆ. ಲೆಕ್ಕಕೊಡಿ ಎಂದು ಸಿದ್ದರಾಮಯ್ಯನವರು ಕೇಳಬೇಕಿಲ್ಲ. ಕೋವಿಡ್ ಲೆಕ್ಕವನ್ನು ಸಿದ್ದರಾಮಯ್ಯನವರ ಮನೆ ಬಾಗಿಲಿಗೆ ತಲುಪಿಸುತ್ತೇವೆ. ಪ್ರತಿಯೊಬ್ಬ ಸಾರ್ವಜನಿಕರಿಗೂ ಲೆಕ್ಕ ಸಿಗುತ್ತೆ. ಕೋವಿಡ್-19 ವಿಚಾರದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಭ್ರಷ್ಟಾಚಾರ ನಡೆಯಲು ಇದು ಕಾಂಗ್ರೆಸ್ ಸರ್ಕಾರ ಅಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗ ಎಷ್ಟು ಭ್ರಷ್ಟಾಚಾರ ನಡೆದಿದೆ ಅಂತ ಇಡೀ ದೇಶಕ್ಕೆ ಗೊತ್ತು ಎಂದು ಕಾಲೆಳೆದರು.
ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ಮೋದಿ ಯಾವುದೇ ಕಳಂಕ ಇಲ್ಲದೆ ಅಧಿಕಾರ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಈವರೆಗೆ 400 ರಿಂದ 500 ಕೋಟಿ ರೂ. ಮಾತ್ರ ಕೊರೊನಾಗೆ ಖರ್ಚಾಗಿದೆ. 2 ಸಾವಿರ ಕೋಟಿ ರೂ. ಭ್ರಷ್ಟಾಚಾರ ನಡೆಯಲು ಹೇಗೆ ಸಾಧ್ಯ. ಕೋವಿಡ್ ಸಮರದಲ್ಲಿ ವಿಪಕ್ಷಗಳು ಸಹಕಾರ ಕೊಡುತ್ತಿಲ್ಲ ಎಂದು ಹೇಳಿದರು.
ಹಾಸಿಗೆ, ದಿಂಬು ಅವ್ಯವಹಾರ ನಡೆದಿದೆ ಎಂದು ಡಿ.ಕೆ. ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದ ಅಶೋಕ್, ಕೊರೊನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವೈರಸ್ ಹರಡುವಿಕೆ ನಿಯಂತ್ರಿಸಲು ಶಕ್ತಿ ಮೀರಿ ಶ್ರಮಿಸುತ್ತಿದ್ದೇವೆ. ರಾಜ್ಯಾದ್ಯಂತ ಕೊರೊನಾ ಕೇಸ್ಗಳು ಜಾಸ್ತಿ ಆಗುತ್ತಿವೆ. ಕೊರೊನಾ ನಿಯಂತ್ರಣದ ಬಗ್ಗೆ ಪ್ರತಿಪಕ್ಷಗಳು ಸರ್ಕಾರಕ್ಕೆ ಸಲಹೆ ನೀಡಲಿ. ಇಂತಹ ಸಂದರ್ಭಗಳಲ್ಲಿ ರಾಜಕೀಯ ಬೇಡ ಎಂದರು.
ಬೆಂಗಳೂರು ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ. ಆದ್ದರಿಂದಲೇ ಒಂದು ವಾರ ಲಾಕ್ಡೌನ್ ಜಾರಿ ಮಾಡಿದ್ದೇವೆ. ಲಾಕ್ಡೌನ್ ಮಾಡುವುದು ಮುಖ್ಯವಲ್ಲ. ಅದರಿಂದ ವೈರಸ್ ಹರಡುವ ವೇಗಕ್ಕೆ ಎಷ್ಟರ ಮಟ್ಟಿಗೆ ತಡೆ ಹಾಕುತ್ತೇವೆ ಎಂಬುದು ಮುಖ್ಯ ಎಂದು ಹೇಳಿದರು.
ಮೈಸೂರು ಲಾಕ್ಡೌನ್ ವಿಚಾರ ಜಿಲ್ಲಾಧಿಕಾರಿಗಳ ಪರಮಾಧಿಕಾರಕ್ಕೆ ಬಿಟ್ಟಿದ್ದು. ಮೈಸೂರಿನಲ್ಲೂ ಕೊರೊನಾ ಕೇಸ್ಗಳು ಹೆಚ್ಚಾಗಿವೆ. ಜಿಲ್ಲೆಗಳ ಪರಿಸ್ಥಿತಿ ಬಗ್ಗೆ ಮಂಗಳವಾರ ಸಿಎಂ ವಿಡಿಯೋ ಸಂವಾದ ನಡೆಸಿದ್ದಾರೆ. ಲಾಕ್ಡೌನ್ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲು ಡಿಸಿಗಳಿಗೆ ಆದೇಶ ನೀಡಿದ್ದೇವೆ. ಇಲ್ಲಿನ ಪರಿಸ್ಥಿತಿ ನೋಡಿ ಜಿಲ್ಲಾಧಿಕಾರಿ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ: ದೇಶದ ಇತಿಹಾಸದಲ್ಲಿ ಬ್ರಾಹ್ಮಣ ಸಮುದಾಯಕ್ಕೂ ಇದೇ ಮೊದಲ ಬಾರಿಗೆ, ನಮ್ಮ ಸರ್ಕಾರದಿಂದ ರಾಜ್ಯದಲ್ಲಿ ಜಾತಿ ಪ್ರಮಾಣಪತ್ರ ಕೊಡಲಾಗುವುದು ಎಂದು ಹೇಳಿದರು.