ಮೈಸೂರು: ಸಿದ್ದರಾಮಯ್ಯ ಸಿಎಂ ಆಗಿ ಮುಂದುವರೆಯಬೇಕು. ಈ ನಡುವೆ ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕು ಎಂಬ ಹೇಳಿಕೆ ವೈಯಕ್ತಿಕವಾದುದು. ಯಾರು ಸಿಎಂ ಆಗಬೇಕು, ಯಾರು ಮುಂದುವರೆಯಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಒಂದು ವೇಳೆ ಹೈಕಮಾಂಡ್ ನೀನು ಸಿಎಂ ಆಗು ಎಂದರೆ ನಾನೂ ಸಿಎಂ ಆಗಲು ಸಿದ್ಧ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮೈಸೂರಿನಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿರುವ ಪ್ರಿಯಾಂಕ್ ಖರ್ಗೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತಮ್ಮ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ನಡೆಸುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದರು.
ಸಿಎಂ ಅಧಿಕಾರ ಹಂಚಿಕೆ ವಿಚಾರ ದೆಹಲಿಯಲ್ಲಿ ನಾಲ್ಕು ಜನ ಕುಳಿತು ಮಾತನಾಡಿದ್ದಾರೆ. ಅವರಿಗೆ ಮಾತ್ರ ಈ ವಿಚಾರದಲ್ಲಿ ಸ್ಪಷ್ಟತೆ ಇದೆ. ಸಿಎಂ ಅವರ ನಿನ್ನೆ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ, ಜಿಲ್ಲಾ ಪಂಚಾಯತ್ ಸದಸ್ಯರಿಂದ ಹಿಡಿದು ಶಾಸಕರವರೆಗೆ ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ಹೇಳಲು ಸ್ವಾತಂತ್ರ್ಯವಿದೆ. ಇದರಲ್ಲಿ ತಪ್ಪೇನೂ ಇಲ್ಲ. ಆದರೆ ಹೇಳಿಕೆಗಳು ಕಲ್ಲಿನಿಂದ ಬರೆದ ಶಾಸನವಲ್ಲ. ಎಲ್ಲವೂ ಪಕ್ಷದ ಹೈ ಕಮಾಂಡ್ಗೆ ಬಿಟ್ಟದ್ದು ಎಂದು ಸಚಿವ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಲೀಡರ್‌ಲೆಸ್ ಪಾರ್ಟಿ: ರಾಜ್ಯದಲ್ಲಿ ವಿರೋಧ ಪಕ್ಷದ ಎಲ್ಲಿದೆ? ಬಿಜೆಪಿ ಲೀಡರ್‌ಲೆಸ್ ಪಾರ್ಟಿ, ಜೆಡಿಎಸ್ ಪೀಪಲ್‌ಲೆಸ್ ಪಾರ್ಟಿ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು. ರಾಜ್ಯದಲ್ಲಿರುವ ಬಿಜೆಪಿ ನಾಯಕರಿಗೆ ಧ್ವನಿ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಗರ್ಜಿಸುವ ಬದಲು, ಕೇಂದ್ರದ ನಾಯಕರ ಬಳಿ ಗರ್ಜಿಸಿದರೆ ಪ್ರತಿಪಕ್ಷ ನಾಯಕನ ಸ್ಥಾನವಾದರೂ ಸಿಗಲಿದೆ ಎಂದು ಲೇವಡಿ ಮಾಡಿದರು.
ಜೆಡಿಎಸ್-ಬಿಜೆಪಿ ಮೈತ್ರಿಯ ಬಗ್ಗೆ ಇದೇ ಸಂದರ್ಭದಲ್ಲಿ ಟೀಕಿಸಿದ ಸಚಿವರು, ನಮಗೆ ಬಿಜೆಪಿಯಿಂದ ಪಾಠ ಕಲಿಯುವ ಅಗತ್ಯವಿಲ್ಲ. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದಾರೆ. ಈಗ ಯಡಿಯೂರಪ್ಪನವರು ಮಾತನಾಡುತ್ತಿರುವುದು ತಮ್ಮ ಮಗನಿಗೆ ಸ್ಥಾನಮಾನ ಸಿಗಲಿ ಎಂಬ ಕಾರಣಕ್ಕಾಗಿ. ಈ ಬಗ್ಗೆ ಬಿಜೆಪಿಯಲ್ಲಿ ರೇಣುಕಾಚಾರ್ಯ ಅವರೇ ಹೇಳುತ್ತಿದ್ದಾರೆ. ಬಿಜೆಪಿಯವರು ತಮ್ಮನ್ನು ತಾವು ನೋಡಿಕೊಳ್ಳಲಿ. ಕಾಂಗ್ರೆಸ್ ಚಿಂತೆ ಅವರಿಗೆ ಬೇಡ. ನಮ್ಮ ಆದ್ಯತೆ ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವುದು, ಒಳ್ಳೆಯ ಆಡಳಿತ ನೀಡುವುದಾಗಿದೆ ಎಂದು ಮೈಸೂರಿನಲ್ಲಿ ಸಚಿವ ಖರ್ಗೆ ಹೇಳಿದರು.
ಇದನ್ನೂ ಓದಿ: "5 ವರ್ಷ ನಮ್ಮದೇ ಸರ್ಕಾರ, ನಾನೇ ಮುಂದುವರೆಯುವೆ": ವಿಜಯನಗರದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ