ಮೈಸೂರು: ರಾಜ್ಯದಲ್ಲಿ ಚುನಾವಣಾ ವರ್ಷವಾದ್ದರಿಂದ ಯಾತ್ರೆಗಳು, ಪಾದಯಾತ್ರೆಗಳು ಸಾಮಾನ್ಯ. ಕಾಂಗ್ರೆಸ್ನಲ್ಲಿ ಪ್ರತ್ಯೇಕವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಯಾತ್ರೆ ಕೈಗೊಳ್ತಿರುವುದರಲ್ಲಿ ಯಾವುದೇ ಅಚ್ಚರಿಯಿಲ್ಲ. ಏಕೆಂದರೆ ಒಬ್ಬರು ದಕ್ಷಿಣ ಮತ್ತೊಬ್ಬರು ಉತ್ತರ. ಅವರು ಯಾವಾಗಲೂ ನಾನೊಂದು ತೀರ ನೀನೊಂದು ತೀರ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಲೇವಡಿ ಮಾಡಿದರು.
ಸಿದ್ದರಾಮಯ್ಯ ಬಹುವಚನ ಕಲಿತಿಲ್ಲ: ಸಿದ್ದರಾಮಯ್ಯ ಯಾವಾಗಲೂ ಏಕವಚನದಲ್ಲಿ ವಾಗ್ದಾಳಿ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸುಧಾಕರ್, ಸಿದ್ದರಾಮಯ್ಯ ಎಲ್ಲವನ್ನೂ ಕಲಿತಿದ್ದಾರೆ. ಆದರೆ ಅವರು ಬಹುವಚನ ಮಾತ್ರ ಕಲಿತಿಲ್ಲ. ಅವರು ಏಕವಚನದಲ್ಲಿ ಮಾತನಾಡುವುದರಲ್ಲಿ ವಿಶೇಷತೆ ಏನೂ ಇಲ್ಲ. ನಾನು ಆ್ಯಕ್ಟಿವ್ ಆಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಅನ್ನು ಸಮರ್ಥವಾಗಿ ಎದುರಿಸುತ್ತಿದ್ದೇನೆ. ಅದಕ್ಕೆ ನನ್ನನ್ನು ಎಲ್ಲರೂ ಟಾರ್ಗೆಟ್ ಮಾಡುತ್ತಾರೆ ಎಂದರು.
ಯಾರೂ ಮತ್ತೆ ಕಾಂಗ್ರೆಸ್‌ಗೆ ಹೋಗುವುದಿಲ್ಲ: ಕಾಂಗ್ರೆಸ್ನಿಂದ ಬಿಜೆಪಿಗೆ ಬಂದಿರುವ ಕೆಲವರು ವಾಪಸ್ ಕಾಂಗ್ರೆಸ್‌ಗೆ ಮರಳುತ್ತಾರೆ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ಯಾರೂ ಮತ್ತೆ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಎಂಎಲ್‌ಸಿ ಹೆಚ್ ವಿಶ್ವನಾಥ್ ಕೂಡಾ ಹೋಗುವುದಿಲ್ಲ ಎಂದು ಭಾವಿಸಿದ್ದೇನೆ. ಆದರೆ ನಾವು ಬಿಜೆಪಿಗೆ ಸೇರ್ಪಡೆಯಾದ ಸಂದರ್ಭದಲ್ಲಿ ವಿಶ್ವನಾಥ್ ನಮ್ಮ ಜೊತೆ ಇರಲಿಲ್ಲ ಎಂದು ಹೇಳಿದರು.
ಇಂದು ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಮೈಸೂರು ವಿಭಾಗದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಗೆ ಸುಧಾಕರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಮಿಕ್ರಾನ್ ರೂಪಾಂತರ ತಳಿ ಪತ್ತೆ ವಿಚಾರದಲ್ಲಿ ರಾಜ್ಯದಲ್ಲಿ ಯಾವುದೇ ಆತಂಕವಿಲ್ಲ. ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿದೆ. ಮಾಸ್ಕ್ ಕಡ್ಡಾಯದ ಬಗ್ಗೆ ಇನ್ನೂ ಯಾವುದೇ ನಿರ್ಧಾರವಾಗಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಭಾರತ್ ಜೋಡೋ ನಂತರ ಸಿದ್ದು, ಡಿಕೆಶಿ ಉಭಯ ನಾಯಕರಿಂದ ಬಸ್ ಯಾತ್ರೆ
ಮಹಾರಾಷ್ಟ್ರದಲ್ಲಿ ಒಂದು ಒಮಿಕ್ರಾನ್ ಪ್ರಕರಣ ಪತ್ತೆಯಾಗಿದ್ದು, ಗಡಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆದಷ್ಟು ಬೇಗ ಮೂರನೇ ಡೋಸ್ ಅನ್ನು ಜನರು ಪಡೆಯುವುದು ಒಳ್ಳೆಯದು. ಆರೋಗ್ಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ನೇಮಕ ಮಾಡಲು ಇನ್ನೆರಡು ವಾರಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗುವುದು. ಮೈಸೂರಿನ ಕೆ.ಆರ್ ಆಸ್ಪತ್ರೆಗೆ ಕಾಯಕಲ್ಪ ಕಲ್ಪಿಸಲಾಗುವುದು ಹಾಗೂ ಮೈಸೂರಿನಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಚಿವರು ಹೇಳಿದರು.