ಮೈಸೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ 17 ಮಂದಿ ಶಾಸಕರು ಮತ್ತೆ ಬಿಜೆಪಿ ಬಿಟ್ಟು ಯಾವುದೇ ಕಾರಣಕ್ಕೂ ಕಾಂಗ್ರೆಸ್ಗೆ ಸೇರ್ಪಡೆ ಆಗಲ್ಲ ಎಂದು ಸಚಿವ ಕೆ ಸಿ ನಾರಾಯಣ ಗೌಡ ಹೇಳಿದರು.
ಇಂದು ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ. ಗುಜರಾತ್ ನಂತೆ ಕರ್ನಾಟಕದಲ್ಲೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಹಿಮಾಚಲ ಪ್ರದೇಶದಲ್ಲಿ ಕೆಲವೊಂದು ಸ್ಥಳೀಯ ಕಾರಣಗಳಿಂದ ಬಿಜೆಪಿಗೆ ಸೋಲಾಗಿದೆ ಎಂದು ಹೇಳಿದರು.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಜನಸಂಕಲ್ಪ ಯಾತ್ರೆ ನಡೆಯಲಿದ್ದು, ಈಗಾಗಲೇ ಶ್ರೀರಂಗಪಟ್ಟಣದ ಸಚ್ಚಿದಾನಂದ ಬಿಜೆಪಿ ಸೇರಿದ್ದಾರೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಮಂಡ್ಯ ಜಿಲ್ಲೆಯ ನಾಯಕರುಗಳು ಬಿಜೆಪಿಗೆ ಸೇರಲಿದ್ದಾರೆ, ಯಾವ್ಯಾವ ನಾಯಕರುಗಳು ಸೇರುತ್ತಾರೆ ಎಂಬುದನ್ನು ಈಗಲೇ ಹೇಳುವುದಿಲ್ಲ ಎಂದು ತಿಳಿಸಿದರು.
ಮತ್ತೆ ಕಾಂಗ್ರೆಸ್ಗೆ ಸೇರುವುದಿಲ್ಲ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕರು ಮತ್ತೆ ಕಾಂಗ್ರೆಸ್ ಸೇರ್ಪಡೆ ಅಗಲಿದ್ದಾರೆ ಎಂಬ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾವು 17 ಮಂದಿ ಯಾವ ಕಾರಣಕ್ಕೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುವುದಿಲ್ಲ. ಬಿಜೆಪಿ ಪಕ್ಷ ಸೇರ್ಪಡೆ ಅದ ನಂತರ ನಮ್ಮನ್ನ ಚೆನ್ನಾಗಿ ನಡೆಸಿ ಕೊಂಡಿದೆ. ನಮಗೆಲ್ಲ ಸಚಿವ ಸ್ಥಾನ ಕೊಟ್ಟು ಸ್ವಾತಂತ್ರ್ಯವಾಗಿ ಕೆಲಸ ಮಾಡಲು ಅವಕಾಶ ದೊರಕಿದೆ. ಅದ್ದರಿಂದ ಯಾವುದೇ ಕಾರಣಕ್ಕೂ ಮತ್ತೆ ಕಾಂಗ್ರೆಸ್ ಸೇರ್ಪಡೆ ಆಗುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಗೂಂಡಾಗಳನ್ನು ಹುಟ್ಟು ಹಾಕಿದ್ದೆ ಕಾಂಗ್ರೆಸ್: ರಾಜ್ಯದಲ್ಲಿ ರೌಡಿ ಶೀಟರ್ಗಳು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಗೂಂಡಾಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್. ಕಾಂಗ್ರೆಸ್ನಲ್ಲಿ ಎಷ್ಟು ಜನ ಗೂಂಡಾಗಳು ಇಲ್ಲಾ, ಅವರೇ ಟ್ರೇನಿಂಗ್ ಕೊಟ್ಟಿದ್ದು. ಕಾಂಗ್ರೆಸ್ನವರು ಗೂಂಡಾಗಳು ಎಂದು ಕರೆಯುವವರು ಮೊದಲು ಕಾಂಗ್ರೆಸ್ನಲ್ಲೆ ಇದ್ದರು. ಈಗ ಬಿಜೆಪಿ ಸೇರ್ಪಡೆ ಆಗಲು ಮುಂದಾಗಿದ್ದರಿಂದ ಅವರನ್ನ ಗೂಂಡಾಗಳೆಂದು ಕಾಂಗ್ರೆಸ್ ಕರೆಯುತ್ತಿದೆ.
ಅವರು ಕಾಂಗ್ರೆಸ್ನಲ್ಲಿದ್ದಾಗ ಮಾತ್ರ ರೌಡಿ ಶೀಟರ್ಗಳು ಆಗಿರಲಿಲ್ಲವೇ. ಇವರಿಗೆ ಹಣ ಪೂರೈಕೆ ಮಾಡುವವರು ಯಾರು ಎಂದು ಪ್ರಶ್ನೆ ಮಾಡಿದ ಸಚಿವರು, ವಿದ್ಯಾವಂತರು, ತ್ಯಾಗಿಗಳು, ಆರ್ಎಸ್ಎಸ್ ಹಿನ್ನೆಲೆ ಉಳ್ಳವರು ಬಿಜೆಪಿಯಲ್ಲಿ ಇದ್ದಾರೆ ಹೊರತು ಕೈಯಲ್ಲಿ ಮಚ್ಚು ಹಿಡಿಯುವವರು ಬಿಜೆಪಿಯಲ್ಲಿ ಇಲ್ಲ ಅವರು ಯಾವ ಪಕ್ಷದಲ್ಲಿ ಇದ್ದರೆ ಎಂಬುದು ಎಲ್ಲರಿಗೂ ಗೊತ್ತು ಎಂದು ನಾರಾಯಣ ಗೌಡ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಜ್ವಲಂತ ಸಮಸ್ಯೆಗಳಿಗೆ ನಮ್ಮ ಸರ್ಕಾರದಲ್ಲಿ ಶೀಘ್ರ ಪರಿಹಾರ: ಸಚಿವ ಕೆ ಗೋಪಾಲಯ್ಯ