ಮೈಸೂರು : ಮಾನಸಿಕ ಅಸ್ವಸ್ಥೆಯಾಗಿದ್ದ ಮಹಿಳೆಯೋರ್ವರು ಗುಣಮುಖರಾಗಿ ತನ್ನ ಗಂಡನನ್ನು ಸೇರಿರುವ ಘಟನೆ ಮೈಸೂರಿನಲ್ಲಿ ನಡೆಯಿತು. ಏಳು ತಿಂಗಳ ನಂತರ ಮಹಿಳೆ ಮತ್ತೆ ಪತಿಯೊಂದಿಗೆ ತಮ್ಮ ಊರಿಗೆ ಮರಳಿದರು. ನಿರಾಶ್ರಿತ ಕೇಂದ್ರದಲ್ಲಿದ್ದವರೆಲ್ಲ ಅರೆಕ್ಷಣ ಕಣ್ಣೀರು ಹಾಕಿದರು.
ಮಾನಸಿಕ ಅಸ್ವಸ್ಥೆಯೊಬ್ಬರು ದಾರಿ ತಪ್ಪಿ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಸಿದ್ದಯ್ಯನಹುಂಡಿ ಗ್ರಾಮದ ಬಸ್ ನಿಲ್ಧಾಣಕ್ಕೆ ಬಂದಿದ್ದರು. ಮಹಿಳೆಯೊಬ್ಬರು ಬಸ್ ನಿಲ್ದಾಣದಲ್ಲಿರುವುದನ್ನು ಕಂಡ ಸಾರ್ವಜನಿಕರು ಮತ್ತು ಪತ್ರಕರ್ತರು ಇಲ್ಲಿನ ಮಹಿಳಾ ಸಾಂತ್ವನ ಕೇಂದ್ರದ ಜಯಶೀಲಾ ಎಂಬವರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಅವರು ಪೊಲೀಸರಿಗೆ ಮಾಹಿತಿ ನೀಡಿ ಮಹಿಳೆಯನ್ನು ಮನೋರೋಗಿಗಳ ನಿರಾಶ್ರಿತ ತಾಣಕ್ಕೆ ಸೇರಿಸಿದರು. ಇಲ್ಲಿ ಮಹಿಳೆಗೆ ಕಳೆದ ಏಳು ತಿಂಗಳುಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
ಇದನ್ನೂ ಓದಿ : ಬಿಜೆಪಿ ಮಹಿಳಾ ಸಮಾವೇಶದಲ್ಲಿ ಭಾಷಣ: ನಟಿ ಶೃತಿ ವಿರುದ್ಧ ಪ್ರಕರಣ ದಾಖಲು
ಹೆಚ್.ಡಿ.ಕೋಟೆ ತಾಲೂಕಿನ ನಿರಾಶ್ರಿತ ಮನೋರೋಗಿಗಳ ತಾಣವಾದ ಚಿತ್ತಧಾಮಕ್ಕೆ ಸೇರಿಸಲಾಗಿತ್ತು. ಇಲ್ಲಿ ಸೂಕ್ತವಾಗಿ ಆರೈಕೆ ಮಾಡಲಾಗಿದೆ. ಉಚಿತ ವಸತಿ ಮತ್ತು ಸೂಕ್ತ ಚಿಕಿತ್ಸೆಯನ್ನು ಮಹಿಳೆಗೆ ನೀಡಲಾಯಿತು. ಏಳು ತಿಂಗಳ ಬಳಿಕ ಹಂತ ಹಂತವಾಗಿ ಗುಣಮುಖರಾಗಿದ್ದು ದಿನಕಳೆದಂತೆ ಹಳೆಯ ನೆನಪುಗಳು ಬರತೊಡಗಿದವು. ಹಳೆಯದನ್ನೆಲ್ಲವನ್ನೂ ನೆನಪಿಸಿಕೊಂಡು, ನಾನು ರತ್ನಮ್ಮ. ನನ್ನ ಗಂಡನ ಹೆಸರು ಮಂಜುನಾಥ್. ಚಿತ್ರದುರ್ಗದ ಹಿರಿಯೂರಿನಲ್ಲಿದ್ದಾರೆ. ಅದೇ ನಮ್ಮ ಊರು ಎಂದು ತಿಳಿಸಿದ್ದಾರೆ.
ಈ ಮಾಹಿತಿಯನ್ನು ಆಧರಿಸಿ ಚಿತ್ತಧಾಮದ ಸಿಬ್ಬಂದಿ ಮಹದೇವಸ್ವಾಮಿ ಎಂಬುವವರು ಚಿತ್ರದುರ್ಗದ ಹಿರಿಯೂರಿನಲ್ಲಿದ್ದ ರತ್ನಮ್ಮನ ಪತಿಯನ್ನು ಸಂಪರ್ಕಿಸಿ ಹೆಚ್.ಡಿ ಕೋಟೆಗೆ ಕರೆ ತಂದಿದ್ದಾರೆ. ಸದ್ಯ ರತ್ನಮ್ಮ ಮತ್ತು ಮಂಜುನಾಥ್ ಇಬ್ಬರೂ ಒಂದಾಗಿದ್ದಾರೆ. ದಂಪತಿಗೆ ಹೊರಡುವಾಗ ಹಾರ ಬದಲಾಯಿಸಿಕೊಂಡರು. ಚಿತ್ತಧಾಮದಲ್ಲಿದ್ದ ಇತರ ರೋಗಿಗಳು ಮತ್ತು ಸಿಬ್ಬಂದಿ ತಮಗೆ ಅರಿವಿಲ್ಲದಂತೆ ರತ್ನಮ್ಮ ಹೊರಟದ್ದಕ್ಕೆ ಕಣ್ಣೀರು ಹಾಕಿದರು.
ಇದನ್ನೂ ಓದಿ : ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿ ದರ್ಶನ ಪಡೆದ ಸಿಎಂ ಬೊಮ್ಮಾಯಿ