ಮೈಸೂರು: ಅರಮನೆಯಲ್ಲಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿಯಾಗಿ ಅಮೃತ್ ಮಹಲ್ ತಳಿಗಳ ಬಗ್ಗೆ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ಯದುವೀರ್, ಸುಮಾರು 45 ಸಾವಿರ ಎಕರೆ ಗೋಮಾಳ ಅಮೃತ್ ಮಹಲ್ ತಳಿಗಳ ಅಭಿವೃದ್ಧಿಗೆ ಮೀಸಲಿಡಲಾಗಿತ್ತು. ಹಳ್ಳಿಕಾರ್ ಮತ್ತು ಅಮೃತ್ ಮಹಲ್ ತಳಿಗಳ ಸಂರಕ್ಷಣೆಗೆ ಎಲ್ಲಾ ರೀತಿಯ ಸಹಕಾರವನ್ನು ತಮ್ಮ ಬೇರುಂಡ ಫೌಂಡೇಷನ್ ವತಿಯಿಂದ ನೀಡುತ್ತೇವೆ ಎಂದು ಸಚಿವರಿಗೆ ಯದುವೀರ್ ತಿಳಿಸಿದರು. ಯುದ್ಧದ ಸಂದರ್ಭದಲ್ಲಿ ಅಮೃತ್ ಮಹಲ್ ಗೋವುಗಳನ್ನು ಬಳಸಿಕೊಂಡು ವೈರಿಗಳನ್ನು ಹಿಮ್ಮೆಟ್ಟಿಸಿದ ಉದಾಹರಣೆಗಳಿವೆ ಎಂದು ಯದುವೀರ್ ಹೇಳಿದ್ದು ವಿಶೇಷ.
ಇದೇ ವೇಳೆ ಅಮೃತ್ ಮಹಲ್ ಕಾವಲಿನಲ್ಲಿ ಸುಮಾರು 5 ಸಾವಿರ ಎಕರೆಯಲ್ಲಿ ಮೇವು ಬೆಳೆಯುವ ಉದ್ದೇಶವಿದೆ ಎಂದು ಸಚಿವ ಚವ್ಹಾಣ್ ಹೇಳಿದರು. ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಾಗಿದ್ದಕ್ಕೆ ಯದುವೀರ್ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಈ ಕಾಯ್ದೆಯ ಅನುಷ್ಠಾನ ನಮ್ಮಲ್ಲಿರುವ ದೇಸಿ ತಳಿಗಳ ಸಂರಕ್ಷಣೆಗೆ ನಾಂದಿ ಹಾಡಿದಂತಾಗಿದೆ ಎಂದು ಯದುವೀರ್ ಹರ್ಷ ವ್ಯಕ್ತಪಡಿಸಿದರು.