ಮೈಸೂರು: ಕಾಲುವೆಯಲ್ಲಿ ಮುಳುಗಿ ವೈದ್ಯಕೀಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಎಚ್.ಡಿ. ಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ, ಬೆಂಗಳೂರಿನ ನಿವಾಸಿ ಶೈಲೇಂದ್ರ ಎಂಬುವರ ಪುತ್ರ ಕಿಶನ್ (21) ಮೃತ ವಿದ್ಯಾರ್ಥಿ.
ಸರಗೂರು ತಾಲೂಕಿನ ವಿವೇಕಾನಂದ ಸ್ಮಾರಕ ಆಸ್ಪತ್ರೆಯಲ್ಲಿ ತರಬೇತಿಗಾಗಿ ಐವರು ವಿದ್ಯಾರ್ಥಿಗಳು ಆಗಮಿಸಿದ್ದರು. ಭಾನುವಾರ ಬೀಚನಹಳ್ಳಿ ಎಡದಂಡೆ ನಾಲೆಗೆ ನೀರಿನಲ್ಲಿ ಈಜಲು ತೆರಳಿದ್ದರು. ಈ ವೇಳೆ ಈಜಲು ಬಾರದ ಕಿಶನ್ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ನೀರಲ್ಲಿ ಮುಳುಗುತ್ತಿದ್ದ ಕಿಶನ್ ಅನ್ನು ಸ್ನೇಹಿತರು ಮೇಲೆತ್ತಲು ಪ್ರಯತ್ನಿಸಿದರಾದರೂ ಮೇಲೆತ್ತುವ ವೇಳೆಗಾಗಲೇ ಕಿಶನ್ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಸರಗೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಕಪಿಲಾ ನದಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ: ಮತ್ತೊಂದೆಡೆ ನಂಜನಗೂಡಿನ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಬಳಿ ಕಪಿಲಾ ನದಿಯಲ್ಲಿ ಸುಮಾರು 35 ವರ್ಷದ ಅಪರಿಚಿತ ಮಹಿಳೆ ಮೃತದೇಹ ಪತ್ತೆಯಾಗಿದೆ. ದೇವಾಲಯದ ಮುಡಿಕಟ್ಟೆಯ ಬಳಿ ಶವ ತೇಲುತ್ತಿದ್ದುದನ್ನು ಕಂಡ ಭದ್ರತಾ ಸಿಬ್ಬಂದಿ, ನಂಜನಗೂಡು ಪಟ್ಟಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಂಬಿಗರು ಸೇರಿ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ರಾಯಚೂರು: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ.. ಸಹೋದರನಿಂದ ಆತ್ಮಹತ್ಯೆ ಪ್ರಕರಣ ದಾಖಲು