ಮೈಸೂರು: ಕೊರೊನಾ ವೈರಸ್ ಹಿನ್ನೆಲೆ ಕಾರ್ಪೊರೇಟ್ ಸಂಸ್ಥೆಗಳಂತೆ ರಾಜ್ಯ ಸರ್ಕಾರಿ ನೌಕರರು ಬಯೋಮೆಟ್ರಿಕ್ ಉಪಯೋಗಿಸದಂತೆ ಸೂಚನೆ ನೀಡಲಾಗುವುದು ಎಂದು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,ರಾಜ್ಯದಲ್ಲಿ ಯಾವುದೇ ರೀತಿಯ ಕೊರೊನಾ ವೈರಸ್ ಸೋಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ. ರಾಜ್ಯದಲ್ಲಿ ಮುಂಜಾಗ್ರತಾ ಕ್ರಮವಹಿಸಿದ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಹರಡದಂತೆ ತಡೆಯಲಾಗಿದೆ. ಪ್ರತಿ ಜಿಲ್ಲೆಗಳಲ್ಲಿ ಅಲ್ಲದೇ ತಾಲ್ಲೂಕು ಮಟ್ಟದಲ್ಲಿ ರೋಗ ಪತ್ತೆ ಸಮಿತಿ ರಚಿಸಲಾಗಿದೆೆ ಎಂದರು.
ವಿಶ್ವವನ್ನೇ ನಡುಗಿಸಿರುವ ಕೊರೊನಾ ವೈರಸ್ ಪತ್ತೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರಕ್ತ ಪರೀಕ್ಷೆ ಕೇಂದ್ರಗಳನ್ನು ತೆರಯಲಾಗಿದೆ. ಮಾರಕ ವೈರಸ್ ರೋಗಿಗಳಿಗಾಗಿ 2,500 ಹಾಸಿಗೆಗಳನ್ನು ಮೀಸಲಿಟ್ಟಿದ್ದು, ರಾಜ್ಯಾದ್ಯಂತ ಮುನ್ನೆಚ್ಚರಿಕಾ ಕ್ರಮವಾಗಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಮಾಸ್ಕ್ ಧರಿಸುವ ಅವಶ್ಯಕತೆ ಇಲ್ಲ. ನೆಗಡಿ, ಕೆಮ್ಮು, ಶೀತ ಬಂದ ರೋಗಿಗಳು ಮಾತ್ರ ಮಾಸ್ಕ್ ಬಳಸಬೇಕು. ಮಾಸ್ಕ್ ದರ ಏರಿಕೆ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ವೈದ್ಯಕೀಯ ಸಂಶೋಧನೆ ಹಾಗೂ ಆಸ್ಪತ್ರೆಗಳನ್ನು ಒಗ್ಗೂಡಿಸುವ ಕಾರ್ಯ ಮಾಡಲಾಗುವುದು. ಇದರಿಂದ ರೋಗಿಗಳ ರೋಗ ಪತ್ತೆಗೆ ಹೆಚ್ಚಿನ ಅನುಕೂಲವಾಗಲಿದೆ. ಕೇಂದ್ರ ಸರ್ಕಾರದ ಅನುದಾನ ಪಡೆದು ಚಿಕ್ಕಮಗಳೂರು, ಯಾದಗಿರಿ, ಚಿಕ್ಕಬಳ್ಳಾಪುರ, ರಾಮನಗರ ಜಿಲ್ಲೆಗಳಲ್ಲಿ ಹೊಸ ನಾಲ್ಕು ವೈದ್ಯಕೀಯ ಕಾಲೇಜು ತೆರೆಯಲು ಮುಂದಾಗಿದ್ದೇವೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.