ಮೈಸೂರು: ಸರಳ ದಸರಾ ಆಚರಣೆಗೆ ಸಿದ್ಧತೆ ನಡೆಯುತ್ತಿದ್ದು, ಆನೆಗಳ ಸ್ವಾಗತ ಕಾರ್ಯಕ್ಕೆ 150 ಜನರ ಸಮಿತಿ ರಚಿಸಲಾಗಿದೆ. ಎಲ್ಲಾ ಸದಸ್ಯರು ದೈಹಿಕ ಅಂತರ ಕಾಯ್ದುಕೊಂಡು ಆನೆಗಳ ಸ್ವಾಗತಕ್ಕೆ ಮುಂದಾಗಲಿದ್ದೇವೆ ಎಂದು ಪಾಲಿಕೆ ಮೇಯರ್ ತಸ್ನಿಂ ತಿಳಿಸಿದ್ದಾರೆ.
ಅಕ್ಟೋಬರ್ 2ರಂದು ಮೈಸೂರಿಗೆ ಆನೆಗಳು ಬಂದು ತಲುಪಲಿವೆ. ಸಂಪ್ರದಾಯದಂತೆ ಸರಳವಾಗಿ ಸ್ವಾಗತ ಕಾರ್ಯ ನೆರವೇರಲಿದೆ ಎಂದರು.
ಈಟಿವಿ ಭಾರತ್ನೊಂದಿಗೆ ಮಾತನಾಡಿದ ಅವರು, ಸರಳ ದಸರಾಕ್ಕೆ ಸರ್ಕಾರದಿಂದ ಯಾವ ರೀತಿ ನಿರ್ದೇಶನ ಬರಲಿದೆಯೋ ಅದನ್ನು ಪಾಲಿಸುತ್ತೇವೆ. ಈ ಬಾರಿ ಸರಳ ದಸರಾಗೆ ಸರ್ಕಾರ 10 ಕೋಟಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಪಾಲಿಕೆಗೆ ಎರಡು ಮುಕ್ಕಾಲು ಕೋಟಿ ಕೊಟ್ಟಿದ್ದಾರೆ.
ಇದರಿಂದ ಏನೂ ಅಭಿವೃದ್ಧಿ ಮಾಡಲು ಆಗಲ್ಲ, ಎಲ್ಲಾ ಡಿಸಿಗೆ ಕೊಟ್ಟಿದ್ದಾರೆ ಪಾಲಿಕೆಗೆ ಕೊಟ್ಟಿರುವ ಹಣವನ್ನು ಒಂದು ವಾರ್ಡ್ಗೆ ಕೊಟ್ಟು ಮತ್ತೊಂದು ವಾರ್ಡ್ಗೆ ಕೊಡದಿದ್ದರೆ ಗಲಾಟೆಯಾಗುತ್ತದೆ. ಈ ಬಗ್ಗೆ ಪಾಲಿಕೆಯ ಕಮಿಷನರ್ ಜೊತೆ ಚರ್ಚೆ ಮಾಡುತ್ತೇವೆ ಎಂದರು.
ಇನ್ನು ಪಾಲಿಕೆಯ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ. ಲಾಕ್ಡೌನ್ ಬಳಿಕ ಆರ್ಥಿಕ ಪರಿಸ್ಥಿತಿ ತುಂಬಾನೆ ಹದಗೆಟ್ಟಿದೆ ಎಂದಿದ್ದಾರೆ.