ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಭಾನುವಾರ ತಮ್ಮ ಮಗನ ಹುಟ್ಟುಹಬ್ಬದ ಪ್ರಯುಕ್ತ ಸಮಾವೇಶವನ್ನು ಏರ್ಪಡಿಸಿ ಶಕ್ತಿ ಪ್ರದರ್ಶನ ಮಾಡಿದರು. ಆ ಮೂಲಕ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಸ್ಥಳೀಯ ನಾಯಕರಿಗೆ ಟಾಂಗ್ ನೀಡಿದರು.
ರಾಜ್ಯ ವಿಧಾನ ಸಭಾ ಚುನಾವಣೆಗೆ ಇನ್ನೂ ಎರಡು ತಿಂಗಳು ಬಾಕಿಯಿದೆ. ಈಗಾಗಲೇ ರಾಜ್ಯದಲ್ಲಿ ಚುನಾವಣಾ ಪ್ರಚಾರದ ಕಾವು ಏರುತ್ತಿದೆ. ವಿವಿಧ ರಾಜಕೀಯ ಪಕ್ಷಗಳು ರಾಜ್ಯದ ಬೇರೆ ಬೇರೆ ಕಡೆ ಸಭೆ, ಯಾತ್ರೆಗಳನ್ನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಪಕ್ಷ ಬದಲಾವಣೆ ಮಾಡುತ್ತಿದ್ದಾರೆ. ಆ ಮೂಲಕ ಮುಂದಿನ ವಿಧಾನ ಸಭಾ ಚುನಾವಣೆ ಈಗಾಗಲೇ ರಂಗು ಪಡೆಯುತ್ತಿದೆ.
ಶಕ್ತಿ ಪ್ರದರ್ಶನ: ಚಾಮಂಡೇಶ್ವರಿ ಕ್ಷೇತ್ರದ ದಾರಿಪುರ ಗ್ರಾಮದಲ್ಲಿ, ಜೆಡಿಎಸ್ನ ಯುವ ನಾಯಕ ಜಿ.ಟಿ ದೇವೇಗೌಡರ ಮಗ ಹರೀಶ್ ಗೌಡ ಹುಟ್ಟು ಹಬ್ಬ ಹಾಗೂ ಹೆಚ್ ಡಿ. ಕುಮಾಸ್ವಾಮಿ ಮಗ ನಿಖಿಲ್ ಕುಮಾರಸ್ವಾಮಿ ಹುಟ್ಟುಹಬ್ಬದ ನೆಪದಲ್ಲಿ ಜೆಡಿಎಸ್ ಚಾಮುಂಡೇಶ್ವರಿ ಶಾಸಕ ಜಿ ಟಿ. ದೇವೇಗೌಡ ಸುಮಾರು 40,000ಕ್ಕೂ ಹೆಚ್ಚು ಜನರನ್ನ ಸೇರಿಸಿ ತಮ್ಮ ಶಕ್ತಿ ಪ್ರದರ್ಶನ ಮಾಡಿದರು.
ಏಕೆಂದರೆ ಸ್ಥಳೀಯ ಪ್ರಬಲ ಜೆಡಿಎಸ್ ಮುಖಂಡರಾದ ಮಾವಿನಹಳ್ಳಿ ಸಿದ್ದೇಗೌಡ, ಬೀರಿಹುಂಡಿ ಬಸವಣ್ಣ, ಕೃಷ್ಣ ನಾಯಕ ಹಾಗೂ ಮಾದೇಗೌಡ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತತ್ವದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಆ ಸಂದರ್ಭದಲ್ಲಿ ಸ್ಥಳೀಯ ಶಾಸಕ ಜಿ ಟಿ. ದೇವೇಗೌಡ ಹಾಗೂ ಅವರ ಮಗನ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ನಿನ್ನೆ ಜಿ. ಟಿ ದೇವೇಗೌಡ ಶಕ್ತಿ ಪ್ರದರ್ಶನ ಮಾಡಲು ಈ ಸಮಾವೇಶ ಆಯೋಜಿಸಿದ್ದರು ಎಂದು ತಿಳಿದು ಬಂದಿದೆ.
ಹೆಚ್ಡಿಕೆ ಸಿಎಂ ಮಾಡುವುದೇ ನನ್ನ ಗುರಿ: ನನ್ನನ್ನು ಚಾಮುಂಡೇಶ್ವರಿ ಕ್ಷೇತ್ರದ ಜನ ಎರಡು ಬಾರಿ ಗೆಲ್ಲಿಸಿದ್ದಿರಿ. ಮೂರನೇ ಬಾರಿ ಜೆಡಿಎಸ್ಗೆ ಮತ ನೀಡಿ ನನ್ನನ್ನ ಗೆಲ್ಲಿಸಿದರೆ ಕುಮಾರಸ್ವಾಮಿ ಮತ್ತೆ 3ನೇ ಬಾರಿ ಮುಖ್ಯಮಂತ್ರಿ ಆಗುತ್ತಾರೆ. ಚಾಮುಂಡೇಶ್ವರಿ ಕ್ಷೇತ್ರಕ್ಕೆ ಪಂಚರತ್ನ ಯಾತ್ರೆ ಮೂಲಕ ಕುಮಾರಸ್ವಾಮಿ ಬರುತ್ತಾರೆ. ನೀವೆಲ್ಲ ಜೆಡಿಎಸ್ಗೆ ಮತ ಹಾಕಿದರೆ ಪಕ್ಷ ಅಧಿಕಾರಕ್ಕೆ ಬರಲಿದೆ. ಒಂದೊಂದು ಮತವು ಮುಖ್ಯ. ಈ ಬಾರಿ ಜೆಡಿಎಸ್ನ್ನು ಬೆಂಬಲಿಸಿ ಎಂದು ಮನವಿ ಮಾಡಿದರು. ಇನ್ನು, ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧೆ ಮಾಡುತ್ತಾರೆ. ಮುಂದೊಂದು ದಿನ ನಿಖಿಲ್ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿಗಳಾಗುತ್ತಾರೆ ಎಂದು ಶಾಸಕ ಜಿ ಟಿ. ದೇವೇಗೌಡ ಭವಿಷ್ಯ ನುಡಿದರು.
ಏಕಾಂಗಿ ಹೋರಾಟಕ್ಕೆ ಸಾಥ್ ನೀಡಿ: ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಮಾತನಾಡಿ, 'ಈ ಸಮಾವೇಶದಲ್ಲಿ ಜಿ.ಟಿ ದೇವೇಗೌಡರು ಸವಾಲನ್ನು ಸ್ವೀಕರಿಸಿದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಗೆಲ್ಲುತ್ತಾರೆ. ಅವರ ಮಗ ಜಿ.ಡಿ ಹರೀಶ್ ಗೌಡ ಹುಣಸೂರು ಕ್ಷೇತ್ರದಿಂದ ಗೆಲುವು ಸಾಧಿಸಿ, ಜೆಡಿಎಸ್ 123 ಸ್ಥಾನಗಳೊಂದಿಗೆ, ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ಈಗಾಗಲೇ ಕುಮಾರಸ್ವಾಮಿ ಅವರು ರಾಜ್ಯಾದ್ಯಂತ ಪಂಚರತ್ನ ಯಾತ್ರೆಯ ಮೂಲಕ ಪ್ರಚಾರ ಮಾಡುತ್ತಿದ್ದಾರೆ. ಅವರ ಏಕಾಂಗಿ ಹೋರಾಟಕ್ಕೆ ನೀವೆಲ್ಲಾ ಸಾಥ್ ನೀಡಬೇಕು. ನಾನು ರಾಮನಗರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಈ ಬಾರಿ ಜಿ ಟಿ ದೇವೇಗೌಡ ಹಾಗೂ ಅವರ ಪುತ್ರ ಸೇರಿದಂತೆ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಜೆಡಿಎಸ್ ಗೆಲ್ಲಿಸಬೇಕು' ಎಂದು ಸಮಾವೇಶದಲ್ಲಿಮನವಿ ಮಾಡಿದರು.
ಇದನ್ನೂ ಓದಿ: ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸ್ಥಳೀಯ ಮುಖಂಡರು