ಮೈಸೂರು : ಗೋಮಾಳದ ಜಾಗದಲ್ಲಿ ತನಗೂ ಪಾಲು ಬೇಕು ಎಂದು ಜಗಳ ತೆಗೆದು, ಸಹೋದರನೊಬ್ಬ ಜಮೀನಿನಲ್ಲೇ ಅಣ್ಣ, ಅತ್ತಿಗೆಯನ್ನು ಗುದ್ದಲಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಟಿ ನರಸೀಪುರ ತಾಲೂಕಿನ ನುಗ್ಗೆನಹಳ್ಳಿ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕೊಲೆ ಬಳಿಕ ಆರೋಪಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿ. ನರಸೀಪುರ ತಾಲೂಕಿನ ನುಗ್ಗೆನಹಳ್ಳಿ ಕೊಪ್ಪಲು ಗ್ರಾಮದ ಸಮೀಪದ ಜೀನುಗುಡ್ಡ ಬಳಿ ಸುಮಾರು 170 ಎಕರೆ ಗೋಮಾಳವಿದೆ. ಅದರಲ್ಲಿ 15 ಗುಂಟೆಯಷ್ಟು ಜಾಗದಲ್ಲಿ ಶಿವಲಿಂಗು (62) ಹಾಗೂ ಭಾರತಿ (55) ದಂಪತಿ ಬೇಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಜಾಗದಲ್ಲಿ ತನಗೂ ಪಾಲು ಕೊಡುವಂತೆ ಶಿವಲಿಂಗು ಸಹೋದರ ಹನುಮಂತು (60) ಆಗಾಗ ಅಣ್ಣನ ಜೊತೆ ಜಗಳವಾಡುತ್ತಿದ್ದ ಎನ್ನಲಾಗುತ್ತಿದೆ.
ಪಾಲು ಕೊಡಲು ಸಹೋದರ ನಕಾರ: ಜಮೀನಿನಲ್ಲಿ ಪಾಲು ಕೊಡುವ ಸಂಬಂಧ ಆನೇಕ ಬಾರಿ ಗ್ರಾಮದಲ್ಲಿ ಶಿವಲಿಂಗು ಮತ್ತು ಹನುಮಂತು ನಡುವೆ ಆನೇಕ ಬಾರಿ ರಾಜಿ ಸಂಧಾನ ನಡೆದಿತ್ತು. ಇದರಿಂದ ಯಾವುದೇ ಪ್ರಯೋಜನ ಆಗಿರಲಿಲ್ಲ. ಆಗಾಗ ಇದೇ ವಿಷಯಕ್ಕೆ ಸಹೋದರರ ಮಧ್ಯೆ ಹಲವು ಸಲ ಜಗಳ ನಡೆದಿತ್ತು. ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ದಂಪತಿ ತಮ್ಮ ಪಾಡಿಗೆ ತಾವು ಇದ್ದರು.
ಆದರೆ, ಮಂಗಳವಾರ ಮಧ್ಯಾಹ್ನ ಭಾರತಿ ಮತ್ತು ಶಿವಲಿಂಗು ದಂಪತಿ ಎಂದಿನಂತೆ ಜಮೀನಿನಲ್ಲಿ ಕೆಲಸ ಮಾಡಲು ಬಂದಿದ್ದರು. ಆಗ ಅಲ್ಲಿಗೆ ಬಂದ ಹನುಮಂತು ಜಗಳ ತೆಗೆದು, ತನಗೂ ಈ ಜಮೀನಿನಲ್ಲಿ ಪಾಲು ಕೊಡಲು ಕೇಳಿದ್ದಾನೆ. ಇಲ್ಲದಿದ್ದರೆ ಸಂಪೂರ್ಣ ಜಮೀನನ್ನು ಬಿಟ್ಟುಕೊಡಿ ಎಂದು ಕೂಗಾಡಲಾರಂಭಿಸಿದ್ದಾನೆ. ಈ ಜಗಳ ವಿಕೋಪಕ್ಕೆ ತಿರುಗಿ, ಯಾವುದೇ ಕಾರಣಕ್ಕೂ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಶಿವಲಿಂಗು ಹೇಳಿದಾಗ, ಕುಪಿತಗೊಂಡ ಹನುಮಂತು ಅಲ್ಲೇ ಬಿದ್ದಿದ್ದ ಗುದ್ದಲಿಯಿಂದ ಅಣ್ಣನ ತಲೆಗೆ ಬಲವಾಗಿ ಹೊಡೆದಿದ್ದಾನೆ. ಜೊತೆಗೆ ತಡೆಯಲು ಬಂದ ಅತ್ತಿಗೆ ತಲೆಗೂ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಬಳಿಕ ಹನುಮಂತು ತಾನೇ ಪೊಲೀಸ್ ಠಾಣೆಗೆ ಕರೆ ಮಾಡಿ, ಅಣ್ಣ ಮತ್ತು ಅತ್ತಿಗೆಯನ್ನು ನಾನೇ ಕೊಲೆ ಮಾಡಿದ್ದೇನೆ ಎಂದು ಹೇಳಿ, ಸ್ವಲ್ಪ ಹೊತ್ತಿನ ಬಳಿಕ ತಾನೇ ಠಾಣೆಗೆ ಹೋಗಿ ಶರಣಾಗಿದ್ದಾನೆ.
ಎಸ್ಪಿ ಸೀಮಾ ಲಾಟ್ಕರ್ ಹೇಳಿದ್ದೇನು : ವಿಷಯ ತಿಳಿದು ಸ್ಥಳಕ್ಕೆ ಮೈಸೂರು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಎಸ್ಪಿ ಸೀಮಾ ಲಾಟ್ಕರ್, ''ಊರಿನವರ ಪ್ರಕಾರ ಜೀನುಗುಡ್ಡದಲ್ಲಿ 170 ಎಕರೆ ಗೋಮಾಳದಲ್ಲಿ ನುಗ್ಗೆನಹಳ್ಳಿ ಗ್ರಾಮಸ್ಥರು ಬೇಸಾಯ ಮಾಡಿಕೊಂಡಿದ್ದಾರೆ. ಶಿವಲಿಂಗು ಮತ್ತು ಭಾರತಿ 15 ಗುಂಟೆಯಲ್ಲಿ ವ್ಯವಸಾಯ ಮಾಡಿಕೊಂಡಿದ್ದರು. ಅದರಲ್ಲಿ ಆರೋಪಿ ಹನುಮಂತು ತನಗೂ ಪಾಲು ಕೊಡುವಂತೆ ಆಗಾಗ ಸಹೋದರನ ಜೊತೆ ಜಗಳವಾಡುತ್ತಿದ್ದ'' ಎಂದು ತಿಳಿಸಿದ್ದಾರೆ.
ಈ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ಓದಿ: ವಿವಾಹಯೇತರ ಸಂಬಂಧ : ಮಹಿಳೆಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪ್ರಿಯಕರ