ಮೈಸೂರು : ಪ್ರತಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪೂರಕವಾಗಿ ಒಂದು ರೀತಿ ಸಭೆ ಸಮಾರಂಭಗಳು ನಡೆಯುತ್ತಿರುತ್ತವೆ. ಈ ಸಂದರ್ಭದಲ್ಲಿ ಎಲ್ಲಾ ಒಂದಾಗುವ ಮಾತು ಕೇಳಿಬರುತ್ತದೆ. ಇದು ಒಂದು ರೀತಿ ಯಾಂತ್ರಿಕವಾಗಿ ನಡೆಯುತ್ತದೆ. ಈ ಬಗ್ಗೆ ನಾನು ಹೆಚ್ಚಾಗಿ ಮಾತನಾಡುವುದಿಲ್ಲ ಎಂದು ಮಹಾಘಟಬಂಧನ್ ಸಭೆಯ ಬಗ್ಗೆ ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಿದರು. ಹಾಗೂ ಈ ಬಗ್ಗೆ ಹೆಚ್ಚಿಗೆ ಮಾತನಾಡಲು ನಿರಾಕರಿಸಿದರು.
ಇಂದು ಮೈಸೂರಿನ ವಸ್ತು ಪ್ರದರ್ಶನದ ಪ್ರಾಧಿಕಾರದ ಕಚೇರಿಯಲ್ಲಿ, ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆಯ ಅನುಷ್ಠಾನಕ್ಕೆ ಅಧಿಕಾರಿಗಳ ಸಭೆ ನಡೆಸಿದ ನಂತರ, ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಮೈಸೂರು-ಕೊಡಗು ಅಭಿವೃದ್ಧಿ ಬಗ್ಗೆ ಹೆಚ್ಚಾಗಿ ಒತ್ತು ನೀಡಿದ್ದೇನೆ. ಹಾಗಾಗಿ ರಾಜಕೀಯವಾಗಿ ಹೆಚ್ಚಾಗಿ ಮಾತನಾಡುವುದಿಲ್ಲ ಎಂದು ಮೈತ್ರಿಕೂಟದ ಮಹಾಘಟಬಂಧನ್ ಬಗ್ಗೆ ಚುಟುಕಾಗಿ ಪ್ರತಿಕ್ರಿಯಿಸಿದರು.
ಚಾಮುಂಡಿ ಬೆಟ್ಟಕ್ಕೆ ಪ್ರತ್ಯೇಕ ಪ್ರಾಧಿಕಾರ ಸ್ವಾಗತಾರ್ಹ: ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವುದು ಸ್ವಾಗತಾರ್ಹ. ಅದೇ ರೀತಿ ದಸರಾ ಪ್ರಾಧಿಕಾರ ರಚನೆ ಮಾಡಬೇಕಿತ್ತು. ಆದರೂ ಚಾಮುಂಡಿ ಬೆಟ್ಟದ ಅಭಿವೃದ್ಧಿ ದೃಷ್ಟಿಯಿಂದ ಪ್ರತ್ಯೇಕ ಪ್ರಾಧಿಕಾರ ಮಾಡಿರುವುದು ಸ್ವಾಗತಾರ್ಹ. ಚಾಮುಂಡಿ ಬೆಟ್ಟದ ಪಾವಿತ್ರ್ಯತೆಯನ್ನ ಕಾಪಾಡುವ ನಿಟ್ಟಿನಿಂದ, ಅನಧಿಕೃತವಾಗಿ ನೆಲೆಸಿರುವವರನ್ನು ತೆರವುಗೊಳಿಸಬೇಕಾಗಿದೆ. ಈಗಾಗಲೇ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ, ಚಾಮುಂಡಿ ಬೆಟ್ಟದ ಅಭಿವೃದ್ಧಿಗೆ 45 ಕೋಟಿ ರೂ. ಹಣ ಬಂದಿದೆ. ಇದರಿಂದ ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದರು.
ದೇವಾಲಯದ ಮುಂಭಾಗದಲ್ಲಿ ಮಂಟಪ ಮಾಡುವ ಅಗತ್ಯವಿರಲಿಲ್ಲ. ಬೆಟ್ಟದ ಮೇಲ್ಭಾಗದಲ್ಲಿ ಬೆಂಗಳೂರಿನ ಕೆಲವರು ಆಸ್ತಿ ಮಾಡಿದ್ದಾರೆ. ಸಬ್ ಲೀಝ್ ಮೂಲಕ ಅಲ್ಲಿ ವ್ಯವಹಾರ ಮಾಡುತ್ತಿದ್ದಾರೆ. ಇವರು ಬೆಟ್ಟಕ್ಕೆ ಸಂಬಂಧಪಡದವರು, ಇವರನ್ನು ಅಲ್ಲಿಂದ ತೆರವುಗೊಳಿಸಬೇಕು. ಚಾಮುಂಡಿ ಬೆಟ್ಟದಲ್ಲಿ ದೇವಸ್ಥಾನದ ಅರ್ಚಕರು ಹಾಗೂ ನಾಯಕ ಸಮುದಾಯದ ಮೂಲನಿವಾಸಿಗಳನ್ನು ಹೊರತುಪಡಿಸಿ, ಎಲ್ಲಿಂದಲೋ ಬಂದು ಬೆಟ್ಟದಲ್ಲಿ ನೆಲೆಸಿರುವವರನ್ನು ತೆರವುಗೊಳಿಸಬೇಕು ಹಾಗೂ ಚಾಮುಂಡಿ ಬೆಟ್ಟದ ಮೇಲ್ಭಾಗದಲ್ಲಿ ಹೊಸ ಕಟ್ಟಡಗಳು ನಿರ್ಮಾಣವಾಗದಂತೆ ಕ್ರಮಕೈಗೊಳ್ಳಬೇಕು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ವಸ್ತು ಪ್ರದರ್ಶನ ಅಭಿವೃದ್ಧಿಗೆ 80 ಕೋಟಿ ಬಿಡುಗಡೆ: ಮೈಸೂರಿನ ವಸ್ತು ಪ್ರದರ್ಶನದ ಆವರಣದಲ್ಲಿ ವರ್ಷ ಪೂರ್ತಿ ಚಟುವಟಿಕೆಯಿಂದ ಇರಲು ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಲು, ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆಯಡಿ 80 ಕೋಟಿ ಅನುದಾನ ಬಿಡುಗಡೆ ಆಗಿದೆ. ಈ ಸಂಬಂಧ ಡಿಪಿಆರ್ ಸಿದ್ಧಪಡಿಸಿ ಕಾಮಗಾರಿ ಆರಂಭಿಸಲು ಸಭೆ ನಡೆಸಲಾಗಿದೆ. ಇಲ್ಲಿ ವಿವಿಧ ದೇಶಿಯ ಬ್ರಾಂಡ್ ಉತ್ಪನ್ನಗಳ ಮಾರಾಟ ಮಳಿಗೆಯನ್ನು ಆರಂಭಿಸಿ, ಎಲ್ಲಾ ಬ್ರಾಂಡ್ ಗಳು ಒಂದೇ ಸ್ಥಳದಲ್ಲಿ ಸಿಗುವ ಹಾಗೆ, ವಸ್ತು ಪ್ರದರ್ಶನ ಆವರಣವನ್ನು ಅಭಿವೃದ್ಧಿಪಡಿಸಲು ಈ ಸ್ವದೇಶಿ ದರ್ಶನ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.