ಮೈಸೂರು: ಕಂಸಾಳೆ, ಜಾನಪದ ಗೀತೆಯ ಮೂಲಕ ಜನಸಾಮಾನ್ಯರ ಗಮನ ಸೆಳೆದಿರುವ ನಂಜನಗೂಡು ತಾಲೂಕಿನ ಹಳೇಪುರ ಗ್ರಾಮದ ಮಾದಶೆಟ್ಟರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಒಲಿದು ಬಂದಿದೆ.
ಬಾಲ್ಯದಿಂದ ಕಂಸಾಳೆ ನುಡಿಸುತ್ತಿದ್ದ ಮಾದಶೆಟ್ಟಿ ಅವರು, 20ನೇ ವಯಸ್ಸಿನಲ್ಲಿ ಸಂಪೂರ್ಣ ಜಾನಪದ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜಾತ್ರೆ, ಹಬ್ಬ -ಹರಿದಿನಗಳಲ್ಲಿ ಜಾನಪದ ಹೆಜ್ಜೆ ಹಾಕಿ, ಕಂಸಾಳೆ ನುಡಿಸುತ್ತಾ ಮನೆ ಮನೆಗೂ ತೆರಳಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದಾರೆ. ಧಾರವಾಡ ದ ಜಾನಪದ ಪರಿಷತ್, ಬೆಂಗಳೂರು ಸೇರಿ ಸಾಕಷ್ಟು ಜಿಲ್ಲೆಗಳಲ್ಲಿ ಮಂಟೇಸ್ವಾಮಿ ಕಥೆ, ನೀಲಗಾರ ಸಿದ್ಧಪಾಜಿ ಕಥೆ, ಮಲೆ ಮಹದೇಶ್ವರ ರ ಕಥೆ, ಗುಡಿ ಕಟ್ಟು ಸಾಲು, ಶಂಕರನ ಸಾಲು, ಮಾದಪ್ಪನ ಬೆಟ್ಟದ ಸಾಲು, ನಂಜುಂಡೇಶ್ವರ, ಬಿಳಿಗಿರಿ ರಂಗನ ಸಾಲುಗಳನ್ನು ಕಂಸಾಳೆಗೆ ತಕ್ಕಂತೆ ಹಾಡುತ್ತ ಜನಪದ ಸಿರಿ ಪಸರಿಸಿದ್ದಾರೆ.
ಐದು ಮಂದಿಯ ನಾಲ್ಕು ತಂಡಕ್ಕೆ ಕಥೆ ಹೇಳುವುದು ಕಲಿಸಿದ್ದು, 20 ಕ್ಕೂ ಹೆಚ್ಚು ಮಂದಿಗೆ ಕಂಸಾಳೆ ಕಲಿಸಿದ್ದಾರೆ. ರಾಮನಗರದಲ್ಲಿ ಲೋಕ ಉತ್ಸವ ಪ್ರಶಸ್ತಿ, ಗುಲ್ಬರ್ಗದಲ್ಲಿ ಮಾತೃ ವಂದನಾ ಪ್ರಶಸ್ತಿ ಸೇರಿ ಸಾಕಷ್ಟು ನಗರ ಹಾಗೂ ಗ್ರಾಮಾಂತರ ಭಾಗದ ಪ್ರಶಸ್ತಿ ದೊರೆತಿದೆ. 12 ಆಣಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಕಾಲದಿಂದಲೂ ಕಂಸಾಳೆ ನುಡಿಸುತ್ತಾ ಬಂದಿದ್ದೆನೆ. 10 ರೂಪಾಯಿಗೆ ಒಂದು ರಾತ್ರಿ ಪೂರ್ಣ ಕಥೆ ನಡೆಸಿಕೊಟ್ಟಿದ್ದೇವೆ. ಮನೆ ಮನೆ ಎದುರು ಮಹದೇವನಂತೆ ಭಿಕ್ಷೆ ಮಾಡಿ ಮಕ್ಕಳ ಸಾಕಿದ್ದೇವೆ. ಕಂಸಾಳೆ ಜಾನಪದದಿಂದಲೇ ಸಾಕಷ್ಟು ಬದುಕು ಕಂಡಿದ್ದೇವೆ. ಕಥೆ ಮಾಡದಿದ್ದರೆ ನಾನು ಜೀವನ ನಡೆಸಲಾಗುತ್ತಿರಲಿಲ್ಲ ಎಂದು ತಾವು ನಡೆದು ಬಂದ ದಾರಿಯನ್ನು ನೆನೆಯುತ್ತಾರೆ ಮಾದಶೆಟ್ಟಿ.