ಮೈಸೂರು: ಸಂಸತ್ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ 2ನೇ ಆರೋಪಿ ಮೈಸೂರಿನ ಮನೋರಂಜನ್ ಮನೆಗೆ ದೆಹಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು ಮೂವರು ಪೊಲೀಸ್ ಅಧಿಕಾರಿಗಳು ಮನೋರಂಜನ್ ಮನೆಯಲ್ಲಿ ತಪಾಸಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೆಹಲಿಯ ಮಹಿಳಾ ಪೊಲೀಸ್ ಸೇರಿದಂತೆ ಮೂರು ಜನರ ತಂಡ ಇಂದು ಬೆಳಗ್ಗೆ ಮೈಸೂರಿನ ವಿಜಯನಗರದ ಎರಡನೇ ಹಂತದಲ್ಲಿರುವ ಮನೋರಂಜನ್ ಮನೆಗೆ ಆಗಮಿಸಿತ್ತು. ಬಳಿಕ ಮನೋರಂಜನ್ ಕುಟುಂಬಸ್ಥರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಪೋಷಕರಿಂದ ಮಗನ ಬಗ್ಗೆ ಮಾಹಿತಿ ಪಡೆದ ತನಿಖಾ ತಂಡ, ಮನೋರಂಜನ್ ವಾಸವಿದ್ದ ಕೊಠಡಿಯಲ್ಲಿ ಸುಮಾರು 7 ಗಂಟೆಗೂ ಹೆಚ್ಚು ಕಾಲ ತಪಾಸಣೆ ನಡೆಸಿದೆ. ಪೊಲೀಸರ ತಂಡವು ಕೆಲವು ಮಹತ್ವದ ದಾಖಲೆ, ಮನೋರಂಜನ್ಗೆ ಸೇರಿದ ಪುಸ್ತಕಗಳು, ಕಡತಗಳನ್ನು ತೆಗೆದುಕೊಂಡು ಸಂಜೆ ವೇಳೆಗೆ ಮನೆಯಿಂದ ಹೋಗಿದೆ.
ದೆಹಲಿಯಿಂದ ಬಂದ ಪೊಲೀಸ್ ತಂಡದ ಜೊತೆಗೆ ಕೇಂದ್ರದ ಗುಪ್ತಚರ ಸಂಸ್ಥೆ ಅಧಿಕಾರಿಗಳು ಸಹ ಇದ್ದರು. ಅವರು ಸಹ ಕೆಲವು ಮಾಹಿತಿ ಕಲೆ ಹಾಕಿದ್ದಾರೆ. ಮನೋರಂಜನ್ ಜೊತೆಗೆ ಈ ಪ್ರಕರಣದ ಮತ್ತೋರ್ವ ಆರೋಪಿ ಸಾಗರ್ ಶರ್ಮಾ ಕೂಡ ಮೈಸೂರಿಗೆ ಈ ಹಿಂದೆ ಬಂದಿದ್ದರ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ. ಜೊತೆಗೆ, ಮನೋರಂಜನ್ ವಾಸವಿದ್ದ ಮನೆಯ ಮೇಲಿನ ಪ್ರತ್ಯೇಕ ಕೊಠಡಿಯಲ್ಲಿನ ಯಾವುದೇ ವಸ್ತುಗಳು ಹಾಗೂ ಪುಸ್ತಕಗಳನ್ನು ಮಾರಾಟ ಮಾಡಬಾರದು ಎಂದು ಪೋಷಕರಿಗೆ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಬುಧವಾರ ಲೋಕಸಭಾ ಅಧಿವೇಶನ ನಡೆಯುವ ಸಂದರ್ಭ ಇಬ್ಬರು ದುಷ್ಕರ್ಮಿಗಳು ಸಂಸತ್ಗೆ ನುಗ್ಗಿ ಸ್ಮೋಕ್ ಗ್ಯಾಸ್ ಸಿಡಿಸಿದ್ದರು. ಈ ಪ್ರಕರಣ ಸಂಬಂಧ ಒಟ್ಟು 7 ಮಂದಿಯನ್ನು ಬಂಧಿಸಲಾಗಿದೆ. ಈ ಸಂಬಂಧ ತನಿಖೆ ಚುರುಕುಗೊಳಿಸಿರುವ ಕೇಂದ್ರ ಗುಪ್ತಚರ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳು, ಪ್ರಕರಣದ ಆರೋಪಿ ಮೈಸೂರಿನ ಮನೋರಂಜನ್ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ.
ಮನೋರಂಜನ್ ಬ್ಯಾಂಕ್ ಖಾತೆ ಪರಿಶೀಲನೆ : ಈ ನಡುವೆ ತನಿಖೆ ತೀವ್ರಗೊಳಿಸಿರುವ ಗುಪ್ತಚರ ಇಲಾಖೆಯ ಅಧಿಕಾರಿಗಳು, ಮನೋರಂಜನ್ ಬ್ಯಾಂಕ್ ಖಾತೆ, ಆತನ ಫೋನ್ಗೆ ಬಂದ ಕಾಲ್ ಡಿಟೇಲ್ಸ್ ಹಾಗೂ ಮತ್ತೊಬ್ಬ ಆರೋಪಿ ಸಾಗರ್ ಶರ್ಮಾ ಜೊತೆ ಆತ ಮೈಸೂರಿನಲ್ಲಿ ಎಲ್ಲೆಲ್ಲಿ ಓಡಾಡಿದ್ದ ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಮೈಸೂರಿನಲ್ಲಿ ಬೀಡುಬಿಟ್ಟಿರುವ ಕೇಂದ್ರ ಗುಪ್ತಚರ ಇಲಾಖೆಯ ಅಧಿಕಾರಿಗಳು ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಮನೋರಂಜನ್ ಹಾಗೂ ಆತನ ಕುಟುಂಬದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಸದ್ಯ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಇದನ್ನೂ ಓದಿ : ಸಂಸತ್ ಭದ್ರತಾ ಲೋಪ ಪ್ರಕರಣ: ಮನೋರಂಜನ್ ವಾಸಿಸುತ್ತಿದ್ದ ಮೈಸೂರಿನ ಮನೆ ಕೊಠಡಿಗೆ ಬೀಗ