ಮೈಸೂರು:ಎರಡೂವರೆ ವರ್ಷದ ಮಗುವನ್ನು ಹತ್ಯೆ ಮಾಡಿದ ತಂದೆಗೆ 10 ಸಾವಿರ ರೂ. ದಂಡ ಹಾಗೂ ಜೀವಾವಧಿ ಶಿಕ್ಷ ವಿಧಿಸಿ ಮೈಸೂರಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶನಿವಾರ ತೀರ್ಪು ನೀಡಿದೆ.
ಟಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದ ಹೇಮಂತ್ ಕುಮಾರ್ ಶಿಕ್ಷೆಗೆ ಒಳಗಾದ ಅಪರಾಧಿ. ಪವಿತ್ರ ಎಂಬಾಕೆಯನ್ನು ಹೇಮಂತ್ ಮದುವೆಯಾಗಿದ್ದ. 2016ರ ನವೆಂಬರ್ 20ರಂದು ಚನ್ನರಾಯಪಟ್ಟಣಕ್ಕೆ ಮದುವೆಗೆ ಹೋಗುವ ವಿಚಾರವಾಗಿ ಪತ್ನಿ ಪವಿತ್ರಾಳೊಂದಿಗೆ ಜಗಳ ಮಾಡಿಕೊಂಡಿದ್ದ. ಆದರೂ ಪತ್ನಿ ಪವಿತ್ರಾ, ಪುತ್ರಿ ರಿತ್ಯನ್ಯಾ, ಮೋಹನ್‌ಕುಮಾರ್, ಲತಾ ಅವರ ಜೊತೆಯಲ್ಲಿ ಮದುವೆಗೆ ಹೊರಡುವಾಗ 2016ರ ನವೆಂಬರ್ 11ರ 12 ಗಂಟೆಯಲ್ಲಿ ಮದುವೆ ಛತ್ರದ ಬಳಿ ಪತ್ನಿ ಪವಿತ್ರರೊಂದಿಗೆ ಜಗಳ ಮಾಡಿಕೊಂಡು ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಅಲ್ಲಿಂದ ಹೊರಟಿದ್ದ.
ಪದ್ಮ ಎಂಬುವರ ಮನೆಗೆ ಹೋಗಿ ಅಲ್ಲಿ ಡೆತ್‌ನೋಟ್ ಬರೆದುಕೊಂಡು ಬಂದು ನಂತರ ಮೈಸೂರಿನ ವಿಜಯನಗರ ಠಾಣಾ ವ್ಯಾಪ್ತಿಯ ಹೂಟಗಳ್ಳಿ ಕೈಗಾರಿಕಾ ಪ್ರದೇಶದ ರಾಣೆ ಮದ್ರಾಸ್ ಫ್ಯಾಕ್ಟರಿ ರಸ್ತೆಯಲ್ಲಿರುವ ಮುಚ್ಚಿರುವ ಜೆ ಪಿ ಟೇಡಿಂಗ್ ಕಂಪನಿ ಲಿಮಿಟೆಡ್ ಫ್ಯಾಕ್ಟರಿಯ ಒಳಗೆ ಹೋಗಿ ಅಲ್ಲಿ ಡಿ ಜಿ ರೂಂ ಮುಂಭಾಗದ ಮೆಟ್ಟಿಲುಗಳ ಬಳಿ ಕುಳಿತುಕೊಂಡು ಬ್ಲೇಡ್‌ನಿಂದ ಎರಡು ಕೈಗಳನ್ನು ಹಲವು ಬಾರಿ ಕುಯ್ದುಕೊಂಡ ಹೇಮಂತ್ ಕುಮಾರ್, ನಂತರ ಎರಡೂವರೆ ವರ್ಷದ ಪುತ್ರಿ ರಿತ್ಯನ್ಯಾಳನ ಎಡ ಮುಂಗೈನ 2 ಬಾರಿ ಕತ್ತರಿಸಿ ಕೊಲೆ ಮಾಡಿ ಮೃತ ದೇಹವನ್ನು ಅಲ್ಲೆ ಕಟ್ಟೆಯ ಮೇಲೆ ಎಲೆಗಳ ಮೇಲೆ ಮಲಗಿಸಿ ಬನಿಯನ್ ಮುಚ್ಚಿ ಹೊರಟು ಹೋಗಿದ್ದ. ಕೂರ್ಗಳ್ಳಿಯ ಕೆಆರ್‌ಎಸ್ ರಸ್ತೆಯಲ್ಲಿ ಹಳೆ ಗ್ರಾಮ ಪಂಚಾಯತ್ ಕಾರ್ಯಾಲಯದ ಎದುರು ರಸ್ತೆ ಬದಿಗೆ ಈ ಕೃತ್ಯಕ್ಕೆ ಬಳಸಿದ್ದ ಬ್ಲೇಡ್‌ನ ಬಿಸಾಕಿ ಸಾಕ್ಷ್ಯ ನಾಶ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ.
ಸಾಕ್ಷಿದಾರರ ಸಾಕ್ಷ್ಯಗಳಿಂದ ಹಾಗೂ ದಾಖಲಾತಿಗಳಿಂದ ಆರೋಪಿ ಹೇಮಂತ್ ಕುಮಾರ್, ಮಗುವನ್ನು ಕೊಲೆ ಮಾಡಿರುವುದು ಸಾಬೀತಾಗಿದೆ. ಮೈಸೂರಿನ 4ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಅವರು, ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ವಿಜಯನಗರ ಪೊಲೀಸ್ ಠಾಣೆಯ ಹಿಂದಿನ ಇನ್ಸ್ಪೆಕ್ಟರ್ ಪ್ರಕರಣದ ತನಿಖೆ ಮಾಡಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ ಬಿ ಧರಣ್ಣೆವರ್ ಹಾಗೂ ಎಲ್.ನಾಗರಾಜ್ ಅವರು ವಾದ ಮಂಡಿಸಿದರು.