ಮೈಸೂರು: ಜಾನುವಾರು ಕೊಂದು ಜನರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯೊಂದು ನಂಜನಗೂಡು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದಿದೆ.
ರಾಂಪುರ ಗ್ರಾಮದ ಮಂಜು ಎಂಬುವವರ ಜಮೀನಿನಲ್ಲಿದ್ದ ಹಸುವನ್ನು ಚಿರತೆ ಕಳೆದ ವಾರ ಕೊಂದು ಹಾಕಿತ್ತು. ಇದರಿಂದ ಭಯಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು.
ಜೂನ್ 15 ರಂದೇ ಇಲಾಖೆ ಬೋನ್ ಇಟ್ಟಿತ್ತು. ಕಳೆದ ರಾತ್ರಿ ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದಿದೆ. ಅಂದಾಜು 4 ವರ್ಷದ ಚಿರತೆಯನ್ನು ಅರಣ್ಯಾಧಿಕಾರಿಗಳು ಬಂಡೀಪುರ ಅರಣ್ಯಕ್ಕೆ ಬಿಟ್ಟಿದ್ದಾರೆ.