ಮೈಸೂರು: ಹದಿನೈದು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬೀಳುವ ಮೂಲಕ ಗ್ರಾಮಸ್ಥರು ನಿಟ್ಟುಸಿರು ಬಿಡುವಂತೆ ಮಾಡಿದೆ.
ತಾಲ್ಲೂಕಿನ ಸೋಮೇಶ್ವರಪುರ ಗ್ರಾಮದ ಸುತ್ತಮುತ್ತ ಆಗಾಗ ಕಾಣಿಸಿಕೊಂಡು ಗ್ರಾಮಸ್ಥರಿಗೆ ಭೀತಿ ಮೂಡಿಸಿದ್ದ ಚಿರತೆ ಬೋನಿಗೆ ಬಿದ್ದಿದೆ. ಆಗಾಗ ಕಾಣಿಸಿಕೊಂಡು ಜಾನುವಾರುಗಳನ್ನು ತಿಂದು ತೇಗುತ್ತಿದ್ದ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಹಾಗಾಗಿ ಗ್ರಾಮದ ನಿವಾಸಿ ಹೊಟ್ಟೆ ಪುಟ್ಟಪ್ಪ ಮಹೇಶ್ ಎಂಬುವರ ಜಮೀನಿನಲ್ಲಿ ಬೋನು ಇಡಲಾಗಿತ್ತು. ಆಹಾರ ಅರಸಿ ಬಂದ ಚಿರತೆ ಬೋನಿಗೆ ಬಿದ್ದು, ಆಚೆ ಬರಲು ಘರ್ಜನೆ ಮಾಡುತ್ತಿತ್ತು. ಇದನ್ನು ನೋಡಿದ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಯುವಕರ ಪುಂಡಾಟ:
ಸೆರೆ ಸಿಕ್ಕ ಚಿರತೆ ಬೋನಿನ ಮುಂದೆ ಕೆಲವರು ಸೆಲ್ಫಿ ತೆಗೆದುಕೊಳ್ಳಲು ಹಾಗೂ ವಿಡಿಯೋ ಮಾಡಿಕೊಳ್ಳಲು ಮುಂದಾಗಿ ಚಿರತೆ ಕೆಂಗಣ್ಣಿಗೆ ಗುರಿಯಾಗುತ್ತಿದ್ದರು. ಮೊನ್ನೆಯಷ್ಟೇ ತುಮಕೂರು ಜಿಲ್ಲೆಯಲ್ಲಿ ಸೆರೆ ಸಿಕ್ಕ ಚಿರತೆಗೆ ಕಿಟಲೆ ಮಾಡಲು ಹೋಗಿ ವ್ಯಕ್ತಿಯೋರ್ವನ ಕೈಗೆ ಚಿರತೆ ಪರಚಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇನ್ನು ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಸೆರೆ ಸಿಕ್ಕಿರುವ ಚಿರತೆಯನ್ನು ಕಾಡಿಗೆ ಬಿಡಲು ನಿರ್ಧಾರಿಸಿದ್ದಾರೆ.