ಮೈಸೂರು: ಗರ್ಭ ಧರಿಸಿದ್ದ ಹಸು ಮೇಲೆ ದಾಳಿ ಮಾಡಿದ ಚಿರತೆ, ಅದರ ರಕ್ತ ಹೀರಿ ಪರಾರಿಯಾಗಿರುವ ಘಟನೆ ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮದ ಜಮೀನೊಂದರಲ್ಲಿ ನಡೆದಿದೆ.
ತಾಲೂಕಿನ ಹೆಗ್ಗನೂರು ಗ್ರಾಮದ ನಿವಾಸಿ ರತ್ನಮ್ಮ ಶಂಭಯ್ಯ ಎಂಬುವವರ ಹಸುವಿನ ಮೇಲೆ ದಾಳಿ ನಡೆಸಿದ ಚಿರತೆ, ಹಸುವನ್ನು ಬಲಿ ಪಡೆದಿದೆ. ಅಲ್ಲದೆ ಹಸು ಗರ್ಭ ಧರಿಸಿದ್ದು, ಒಂದು ತಿಂಗಳಲ್ಲಿ ಕರುವಿಗೆ ಜನ್ಮ ನೀಡುವ ಹಂತದಲ್ಲಿತ್ತು. ಆದರೆ ದುರದೃಷ್ಟವಶಾತ್ ಚಿರತೆ ದಾಳಿಗೆ ಸಿಲುಕಿ ಪ್ರಾಣ ಬಿಟ್ಟಿದೆ.
ಸದ್ಯ ಹೆಗ್ಗನೂರು ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರಲ್ಲಿ ಭೀತಿ ಎದುರಾಗಿದೆ. ರಾತ್ರಿ ವೇಳೆ ಜಮೀನಿಗೆ ಹೋಗಲು ಗ್ರಾಮಸ್ಥರು ಹೆದರುವಂತಾಗಿದೆ. ಈ ಕುರಿತು ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿದರೂ ಅರಣ್ಯ ಇಲಾಖೆ ಬೇಜವಾಬ್ದಾರಿ ತೋರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಕೂಡಲೇ ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.