ಮೈಸೂರು : ಬೆಂಗಳೂರಿನಲ್ಲಿ ಅಧಿಕಾರಿ ಕೊಲೆ ಪ್ರಕರಣ ಈಗಷ್ಟೇ ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕೊಲೆ ಪ್ರಕರಣ ಈಗಷ್ಟೇ ಗೊತ್ತಾಗಿದ್ದು, ಅವರು ಒಬ್ಬರೇ ವಾಸವಿದ್ದರು ಎಂದು ತಿಳಿದುಬಂದಿದೆ. ಮಾಹಿತಿ ಸಂಗ್ರಹಿಸಿ ಸೂಕ್ತ ತನಿಖೆ ನಡೆಸುವಂತೆ ಸೂಚಿಸಿದ್ದೇನೆ ಎಂದರು.
ವ್ಯಂಗ್ಯ ಹೇಳಿಕೆಗಳಿಗೆ ಉತ್ತರ ನೀಡುವುದಿಲ್ಲ : ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದಾದರೆ ಜೆಡಿಎಸ್ ಶಾಸಕರ ಬೆಂಬಲ ನೀಡುತ್ತೇವೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ. ಅದಕ್ಕೆಲ್ಲ ನಾನು ಉತ್ತರ ಕೊಡುವುದಿಲ್ಲ. ನೀವು ಬೆಂಬಲ ಕೊಡುವುದಾದರೆ ಎನ್ಡಿಎ ಬಿಟ್ಟು ಬನ್ನಿ ಎಂದು ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದರು.
ಜೊತೆಗೆ ಸಿಎಂ ಬದಲಾವಣೆ ಮಾತಿನ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿ, ಜೆಡಿಎಸ್ನವರು ಸೋತು ಹತಾಶರಾಗಿದ್ದಾರೆ. ಸೋಲಿನ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಸರ್ಕಾರ ಸುಭದ್ರವಾಗಿದೆ. ನಮ್ಮ ಮಂತ್ರಿಗಳು ಏನೇನೋ ಹೇಳಿಕೆಗಳನ್ನು ನೀಡುತ್ತಿದ್ದರಿಂದ ನಿನ್ನೆ ಸಭೆ ಮಾಡಿದ್ದೇವೆ. ಸುಮ್ಮನೆ ಹೇಳಿಕೆ ಕೊಡಬೇಡಿ. ನಿಮ್ಮ ಇಲಾಖೆಯ ಕಡೆ ಗಮನಹರಿಸಿ ಎಂದು ಸೂಚಿಸಿರುವುದಾಗಿ ತಿಳಿಸಿದರು.
ನವೆಂಬರ್ನಲ್ಲಿ ಕಾಂತರಾಜ್ ವರದಿ ಸಲ್ಲಿಕೆ ಆಗಬಹುದು: ಕಾಂತರಾಜ್ ಜನಗಣತಿ ವರದಿ ನಮ್ಮ ಕೈ ಸೇರಿಲ್ಲ. ಆಗಲೇ ಅದಕ್ಕೆ ವಿರೋಧ ಎಂದರೆ ಏನು ಮಾಡಬೇಕು. ವರದಿಯಲ್ಲಿ ಏನಿದೆ ಅನ್ನೋದು ಗೊತ್ತಿಲ್ಲ, ಅಂಕಿ ಅಂಶ ಗೊತ್ತಿಲ್ಲದೆ ಆ ಬಗ್ಗೆ ಮಾತನಾಡಬಾರದು. ನವೆಂಬರ್ ಒಳಗೆ ವರದಿ ಕೊಡಬಹುದು. ಆನಂತರ ವರದಿಯಲ್ಲಿ ಏನಿದೆ? ಎಂಬುದನ್ನು ನೋಡೋಣ ಎಂದು ಸಿಎಂ ಹೇಳಿದರು.
ಕಾಂತರಾಜ್ ವರದಿಯ ಬಗ್ಗೆ ಈಶ್ವರಪ್ಪ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, ಈಶ್ವರಪ್ಪ ಒಂದು ಸವಕಲು ನಾಣ್ಯ. ಆದ್ದರಿಂದಲೇ ಅವರಿಗೆ ಟಿಕೆಟ್ ನೀಡಿಲ್ಲ. ಈಶ್ವರಪ್ಪ ಮಾತಿಗೆ ಬೆಲೆ ಇಲ್ಲ. ಕಾಂತರಾಜ್ ವರದಿ ಪರ ವಿಧಾನಸಭೆಯಲ್ಲಿ ಈಶ್ವರಪ್ಪ ಮಾತನಾಡಿದ್ದಾರೆ. ಈಗ ಅದನ್ನು ಸುಟ್ಟು ಹಾಕುತ್ತೇನೆ ಎಂದರೆ ಏನು ಅರ್ಥ. ಈಶ್ವರಪ್ಪ ಮಾತಿಗೆ ಜಾಸ್ತಿ ಬೆಲೆ ಕೊಡಬೇಡಿ. ಪರೀಕ್ಷಾ ಪ್ರಾಧಿಕಾರ ನಡೆಸುತ್ತಿರುವ ಪರೀಕ್ಷೆಗಳಲ್ಲಿ, ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳ ತಾಳಿಯನ್ನು ಬಿಚ್ಚಿಸಿ ಪರೀಕ್ಷೆ ಬರೆಯಲು ಕಳಿಸುತ್ತಿರುವ ವಿಚಾರ ನನಗೆ ಗೊತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸಚಿವರು ಸಮಯ ನೀಡುತ್ತಿಲ್ಲ : ರಾಜ್ಯದ ಬರಪರಿಸ್ಥಿತಿಯ ಬಗ್ಗೆ ತಿಳಿಸಲು ನಮ್ಮ ರಾಜ್ಯದ ಸಚಿವರಿಗೆ ಕೇಂದ್ರ ಸಚಿವರು ಹಾಗೂ ಪ್ರಧಾನಿ ಮೋದಿ ಸಮಯ ನೀಡುತ್ತಿಲ್ಲ. ಮೂರು ದಿನ ದೆಹಲಿಯಲ್ಲಿ ನಮ್ಮ ಸಚಿವರು ಕಾದು, ಕೊನೆಗೆ ಸಚಿವರ ಕಾರ್ಯದರ್ಶಿಗಳನ್ನ ಭೇಟಿ ಮಾಡಿ ಬರುವ ಸ್ಥಿತಿ ಉಂಟಾಗಿದೆ. ಇದು ಕೇಂದ್ರ ಸರ್ಕಾರ ನಮ್ಮ ರಾಜ್ಯದ ಮೇಲೆ ತೋರುತ್ತಿರುವ ಮಲತಾಯಿ ಧೋರಣೆಗೆ ಸಾಕ್ಷಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿರುವುದನ್ನು ಕೇಂದ್ರ ಸರ್ಕಾರ ಸಹಿಸಿಕೊಳ್ಳುತ್ತಿಲ್ಲ. ಹೀಗಾಗಿ ಬರ ಪರಿಹಾರದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಾನು ಈ ವಿಚಾರದಲ್ಲಿ ಕೇಂದ್ರಕ್ಕೆ ಪತ್ರ ಬರೆಯುತ್ತೇನೆ ಎಂದರು.
ಇಲ್ಲಿ ರಾಜ್ಯದ ಬಿಜೆಪಿ ನಾಯಕರು ಇಲ್ಲಿ ಓಡಾಡುವುದನ್ನು ಬಿಟ್ಟು ಕೇಂದ್ರಕ್ಕೆ ಹೋಗಿ ಪರಿಹಾರ ತರಲಿ ಎಂದು ಹೇಳಿದ ಸಿದ್ದರಾಮಯ್ಯ, ಕೇಂದ್ರದ ಪರಿಹಾರಕ್ಕೆ ನಾವು ಕಾದು ಕುಳಿತಿಲ್ಲ. ಈಗಾಗಲೇ 900 ಕೋಟಿ ಪರಿಹಾರ ಹಣವನ್ನು ಬಿಡುಗಡೆ ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಬರ್ಬರ ಹತ್ಯೆ!