ಮೈಸೂರು : ವಿಶ್ವ ವಿಖ್ಯಾತ ಮೈಸೂರು ಅಂಬಾವಿಲಾಸ ಅರಮನೆ ಇರುವ ಕ್ಷೇತ್ರ ಕೆ ಆರ್ ಕ್ಷೇತ್ರ. ಅಂದರೆ ಕೃಷ್ಣರಾಜ ಕ್ಷೇತ್ರ. ಈ ಕ್ಷೇತ್ರ ಮೈಸೂರು ನಗರದ ಹೃದಯ ಭಾಗದಲ್ಲಿದ್ದು, ವಿದ್ಯಾವಂತರ ಕ್ಷೇತ್ರ ಎಂಬ ಖ್ಯಾತಿ ಪಡೆದಿದೆ. ಇದು ಬಿಜೆಪಿಯ ಭದ್ರ ಕೋಟೆ ಆಗಿದ್ದು, ಈ ಬಾರಿ ಬಿಜೆಪಿಯಿಂದ ಹಾಲಿ ಶಾಸಕರಿಗೆ ಟಿಕೆಟ್ ನೀಡದೆ ಬಿಜೆಪಿ ಕಾರ್ಯಕರ್ತ ಶ್ರೀ ವತ್ಸ ಅವರಿಗೆ ಟಿಕೆಟ್ ನೀಡಲಾಗಿದೆ. ಅದೇ ರೀತಿ ಕಾಂಗ್ರೆಸ್ನಿಂದ ಮಾಜಿ ಶಾಸಕ ಎಂ ಕೆ ಸೋಮಶೇಖರ್ಗೆ ಟಿಕೆಟ್ ನೀಡಿದ್ದು, ಕೃಷ್ಣ ರಾಜ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ನೇರ ಪೈಪೋಟಿ ಇದೆ. ಕ್ಷೇತ್ರದ ಸಮಸ್ಯೆಗಳ ಬಗ್ಗೆ ನಾವು ಗೆದ್ದರೆ ಏನು ಮಾಡುತ್ತೇವೆ ಎಂಬ ಬಗ್ಗೆ ಸ್ವತಃ ಎರಡು ಪಕ್ಷದ ಅಭ್ಯರ್ಥಿಗಳು ಈಟಿವಿ ಭಾರತ್ಗೆ ಸಂದರ್ಶನ ನೀಡಿದ್ದಾರೆ.
ಮೈಸೂರಿನ ಪ್ರಮುಖ ವಿಧಾನಸಭಾ ಕ್ಷೇತ್ರಗಳಲ್ಲಿ ಕೃಷ್ಣರಾಜ ಕ್ಷೇತ್ರವೂ ಒಂದಾಗಿದ್ದು, ಈ ಬಾರಿ ಕೃಷ್ಣರಾಜ ಕ್ಷೇತ್ರದಲ್ಲಿ ನಾಲ್ಕು ಬಾರಿ ಬಿಜೆಪಿ ಶಾಸಕರಾಗಿದ್ದ ರಾಮದಾಸ್ಗೆ ಟಿಕೆಟ್ ನೀಡದೆ, ಸಾಮಾನ್ಯ ಪಕ್ಷದ ಕಾರ್ಯಕರ್ತರಾದ ಟಿ ಎಸ್ ಶ್ರೀ ವತ್ಸ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ನಿಂದ ಮಾಜಿ ಶಾಸಕ ಎಂ ಕೆ ಸೋಮಶೇಖರ್ಗೆ ಟಿಕೆಟ್ ನೀಡಲಾಗಿದ್ದು, ಇಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಜೆಡಿಎಸ್ ಸ್ಪರ್ಧೆ ಮಾಡಿರುವ ಕೆ ವಿ ಮಲ್ಲೇಶ್ ಸಾಂಪ್ರದಾಯಿಕ ಮತಗಳನ್ನು ಮಾತ್ರ ನಂಬಿಕೊಂಡಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಮಾತ್ರ ಸ್ಪರ್ಧೆ ಇದೆ. ಈಗಾಗಲೇ ಇಬ್ಬರು ಅಭ್ಯರ್ಥಿಗಳು ಗೆಲುವಿಗಾಗಿ ಪ್ರಚಾರ ಆರಂಭಿಸಿದ್ದಾರೆ.
ಕ್ಷೇತ್ರದ ಒಟ್ಟು ಮತದಾರರು : ಕೃಷ್ಣರಾಜ ಕ್ಷೇತ್ರದಲ್ಲಿ 2,50,357 ಒಟ್ಟು ಮತದಾರರಿದ್ದಾರೆ. ಅದರಲ್ಲಿ 1,22,442 ಪುರುಷ ಮತದಾರರು, 1,27,886 ಮಹಿಳಾ ಮತದಾರರಿದ್ದು, ಇತರ ಲೈಂಗಿಕ ಅಲ್ಪಸಂಖ್ಯಾತರು 29 ಜನ ಮತದಾರರು ಇದ್ದಾರೆ. ಕಳೆದ ಮೂರು ಚುನಾವಣೆಗಳಲ್ಲಿ ಅಂದರೆ 2008 ಬಿಜೆಪಿ ಪಕ್ಷದಿಂದ ಎಸ್ ಎ ರಾಮದಾಸ್, 2013 ಎಂ ಕೆ ಸೋಮಶೇಖರ್ ಕಾಂಗ್ರೆಸ್ನಿಂದ ಹಾಗೂ 2018 ರಲ್ಲಿ ಬಿಜೆಪಿಯ ಎಸ್ ಎ ರಾಮದಾಸ್ ಆಯ್ಕೆಯಾಗಿದ್ದು, ಕೃಷ್ಣರಾಜ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ ಆಗಿದ್ದು. ಇಲ್ಲಿ ಈ ಬಾರಿ 17 ಮಂದಿ ಅಭ್ಯರ್ಥಿಗಳು ಕೃಷ್ಣ ರಾಜ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ.
ಜಾತಿ ಲೆಕ್ಕಾಚಾರ : ಕೃಷ್ಣರಾಜ ಕ್ಷೇತ್ರದಲ್ಲಿ 55 ಸಾವಿರ ಬ್ರಾಹ್ಮಣ ಮತದಾರರಿದ್ದು, ಪರಿಶಿಷ್ಟ ಜಾತಿ 40 ಸಾವಿರ, ವೀರಶೈವ 30 ಸಾವಿರ, ಕುರುಬ ಸಮುದಾಯ 25 ಸಾವಿರ, ನಾಯಕ ಸಮುದಾಯ 10 ಸಾವಿರ, ಒಕ್ಕಲಿಗರು 18 ಸಾವಿರ, ಅಲ್ಪ ಸಂಖ್ಯಾತರು 8 ಸಾವಿರ, ಮರಾಠರು 5 ಸಾವಿರ, ಜೈನ, ತಮಿಳು ಹಾಗೂ ಇತರ ಸಮುದಾಯದವರು 8 ಸಾವಿರ ಮಂದಿ ಇದ್ದಾರೆ. ಬಹುತೇಕ ಕೃಷ್ಣರಾಜ ಕ್ಷೇತ್ರದಲ್ಲಿ ಬ್ರಾಹ್ಮಣ, ಕುರುಬ, ಲಿಂಗಾಯತ ಮತಗಳೇ ನಿರ್ಣಾಯಕ ಆಗಲಿದೆ.
ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅಭ್ಯರ್ಥಿಗಳು ಹೇಳುವುದೇನು: ಕೃಷ್ಣರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಟಿ ಎಸ್ ಶ್ರೀ ವತ್ಸ ಹೇಳುವ ಪ್ರಕಾರ, ಕೃಷ್ಣ ರಾಜ ಕ್ಷೇತ್ರದಲ್ಲಿ ಕಸದ ಸಮಸ್ಯೆ, ರಾಜಕಾಲುವೆ ಸಮಸ್ಯೆ, ಕುಡಿಯುವ ನೀರಿನ ಸಮಸ್ಯೆ, ಪಾರ್ಕ್ಗಳ ಸರಿಯಾದ ನಿರ್ವಹಣೆ ಇಲ್ಲ. ಅಂಗನವಾಡಿಗಳು ದುಃಸ್ಥಿತಿಯಲ್ಲಿವೆ. ಖಾತಾ ಸಮಸ್ಯೆ ಹಾಗೂ ಎಂ ಜಿ ರಸ್ತೆ ತರಕಾರಿ ಮಾರುಕಟ್ಟೆ ಸಮಸ್ಯೆ ಇದ್ದು, ಗೆಲುವಿನ ನಂತರ ಇವುಗಳನ್ನು ಆದ್ಯತೆ ಮೇರೆಗೆ ಸರಿ ಪಡಿಸುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಎಂ ಕೆ ಸೋಮಶೇಖರ್ ಹೇಳುವ ಪ್ರಕಾರ, ಕೃಷ್ಣರಾಜ ಕ್ಷೇತ್ರದ ಸಮಸ್ಯೆಗಳು ಹೆಚ್ಚಿವೆ. ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳ ಅಭಿವೃದ್ಧಿ ಆಗಿಲ್ಲ. ಸೂಯೆಜ್ ಫಾರಂ ಕಸದ ಸಮಸ್ಯೆ, ಒಳ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ಈ ಎಲ್ಲ ಸಮಸ್ಯೆಗಳನ್ನು ಗೆಲುವಿನ ನಂತರ ಸರಿಪಡಿಸುವುದಾಗಿ ತಿಳಿಸಿದ್ದಾರೆ.
ಒಟ್ಟಾರೆ ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡ ಮೈಸೂರು ನಗರದ ಹೃದಯ ಭಾಗದಲ್ಲಿರುವ ಕೃಷ್ಣರಾಜ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾ ಸ್ಪರ್ಧೆ ಇದೆ. ಗೆಲುವಿಗಾಗಿ ಈಗಾಗಲೇ ಎರಡು ಪಕ್ಷದ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಆರಂಭಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದರೆ ತಾಲಿಬಾನ್ ಮಾದರಿ ಸರ್ಕಾರ ಬಂದಂತೆ: ಪ್ರತಾಪ್ ಸಿಂಹ