ಮೈಸೂರು : ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಚರಣೆಯಲ್ಲಿ 'ಕಿಂಗ್ ಆಫ್ ಆಪರೇಷನ್' ಎಂದು ಕರೆಯಲ್ಪಡುವ ಅಭಿಮನ್ಯು ಆನೆ, ಕಳೆದ 21 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿದ್ದಾನೆ. ಈ ಬಾರಿ ಜಂಬೂಸವಾರಿಯಲ್ಲಿ ಅಂಬಾರಿ ಹೊರಲಿದ್ದಾನೆ. ಈ ಬಗ್ಗೆ ಪಶು ವೈದ್ಯ ಡಾ.ನಾಗರಾಜ್ ಈಟಿವಿ ಭಾರತ್ಗೆ ಮಾಹಿತಿ ನೀಡಿದ್ದಾರೆ.
ಕಳೆದ 21 ವರ್ಷಗಳಿಂದ ದಸರಾದಲ್ಲಿ ಭಾಗವಹಿಸುತ್ತಿರುವ 54 ವರ್ಷದ ಅಭಿಮನ್ಯು ಆನೆ, ತುಂಬಾ ಶಕ್ತಿಶಾಲಿ ಹಾಗೂ ಧೈರ್ಯಶಾಲಿ. ಹೀಗಾಗಿಯೆ, ಹಲವು ಕಾಡಾನೆ ಮತ್ತು ಹುಲಿ ಸೆರೆ ಕಾರ್ಯಾಚರಣೆಗಳು ಅಭಿಮನ್ಯು ನೇತೃತ್ವದಲ್ಲೇ ನಡೆದಿವೆ. ಇವನ ಮೇಲೆ ಕೂತು ಕಾರ್ಯಾಚರಣೆಗೆ ಹೋದರೆ, ನಾವು ವಾಪಸ್ ಬರುತ್ತೇವೆ ಎಂಬ ನಂಬಿಕೆಯಿದೆ. ಬೇರೆ ಆನೆಗಳ ಜೊತೆ ಕಾಡಿಗೆ ನುಗ್ಗಿ ಆಪರೇಷನ್ ಮಾಡಬೇಕಾದರೆ, ಇದಕ್ಕಿಂತ ಬಲಿಷ್ಠ ಕಾಡಾನೆಗಳು ಬಂದಾಗ ಹೆದರಿ ವಾಪಸ್ ಆಗುತ್ತವೆ. ಆದರೆ, ಅಭಿಮನ್ಯು ಹಾಗಲ್ಲ. ಅವನು ಮುಖಕ್ಕೆ ಮುಖ ಕೊಟ್ಟು ನಿಂತು, ಕಾರ್ಯಚರಣೆ ಯಶಸ್ವಿ ಮಾಡುತ್ತಾನೆ. ಆದ್ದರಿಂದಲೇ ಅವನಿಗೆ ಕಿಂಗ್ ಆಫ್ ಆಪರೇಷನ್ ಎಂದು ಕರೆಯುತ್ತೇವೆ ಎಂದು ಡಾ.ನಾಗರಾಜ್ ತಿಳಿಸಿದ್ದಾರೆ.
ಅಭಿಮನ್ಯು ಆನೆಯನ್ನು 1977 ರಲ್ಲಿ ಹೆಬ್ಬಳ ಅರಣ್ಯ ಪ್ರದೇಶದಲ್ಲಿ ಹಳ್ಳ ತೋಡಿ ಹಿಡಿಯಲಾಗಿದೆ. ಅಂದಿನಿಂದ ಇಂದಿನವರೆಗೆ, ಸತತ 21 ವರ್ಷಗಳಿಂದ ಅಭಿಮನ್ಯು ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾನೆ. 2015 ರವರೆಗೆ ದಸರಾ ಜಂಬೂ ಸವಾರಿಯಲ್ಲಿ ಕರ್ನಾಟಕ ವಾದ್ಯಗೋಷ್ಠಿ ಗಾಡಿಯನ್ನು ಅಭಿಮನ್ಯು ಎಳೆದುಕೊಂಡು ಹೋಗುತ್ತಿದ್ದ. ಆನಂತರ, ಆತ ದಪ್ಪ ಆದ ಕಾರಣ ಆ ಕೆಲಸವನ್ನು ನಿಲ್ಲಿಸಲಾಗಿತ್ತು. ಕಳೆದ 6-7 ವರ್ಷಗಳಿಂದ ಶ್ರೀರಂಗಪಟ್ಟಣದಲ್ಲಿ ನಡೆಯುವ ಸಾಂಪ್ರದಾಯಿಕ ಜಂಬೂಸವಾರಿಯಲ್ಲಿ ಮರದ ಅಂಬಾರಿ ವಿಗ್ರಹ ಹೊರುವ ಕೆಲಸವನ್ನು ಮಾಡುತ್ತಿದ್ದಾನೆ. ಈ ವರ್ಷ ಮೊದಲ ಬಾರಿಗೆ ಮೈಸೂರು ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಕೆಲಸ ವಹಿಸಿಕೊಂಡಿದ್ದಾನೆ. ಅದನ್ನು ಖಂಡಿತವಾಗಿಯೂ ಆತ ಯಶಸ್ವಿಯಾಗಿ ನಿರ್ವಹಿಸುತ್ತಾನೆ. ಅಭಿಮನ್ಯು 5 ಸಾವಿರದಿಂದ 5,200 ಕೆ.ಜಿ ತೂಕವಿದ್ದು, ಆರೋಗ್ಯವಾಗಿ ಸದೃಢವಾಗಿದ್ದಾನೆ ಎಂದು ವೈದ್ಯ ಡಾ.ನಾಗರಾಜ್ ವಿವರಿಸಿದ್ದಾರೆ.