ಮೈಸೂರು: ತಿ.ನರಸೀಪುರ ತಾಲ್ಲೂಕಿನ ಶ್ರೀ ಗುಂಜನರಸಿಂಹಸ್ವಾಮಿ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ, ತೆಪ್ಪೋತ್ಸವ ಹಾಗು ಕಾವೇರಿ-ಕಪಿಲ ಸಂಗಮಾರತಿ ಅದ್ಧೂರಿಯಾಗಿ ನಡೆಯಿತು. ಭಕ್ತರು ಭಕ್ತಭಾವದಲ್ಲಿ ಮಿಂದೆದ್ದು ಧಾರ್ಮಿಕ ಕಾರ್ಯಗಳನ್ನು ಕಣ್ತುಂಬಿಕೊಂಡಿದ್ದಾರೆ.
ಶ್ರೀ ಗುಂಜನರಸಿಂಹಸ್ವಾಮಿ ಸೇವಾ ಸಮಿತಿ ಮತ್ತು ಯುವ ಬ್ರಿಗೇಡ್ ವತಿಯಿಂದ ತ್ರಿವೇಣಿ ಸಂಗಮದಲ್ಲಿ ನಡೆದ ತೆಪ್ಪೋತ್ಸವದಲ್ಲಿ ವಿದ್ಯುತ್ ದೀಪಾಲಂಕಾರದ ಭವ್ಯ ಮಂಟಪದಲ್ಲಿ ನರಸಿಂಹಸ್ವಾಮಿಯನ್ನು ಕೂರಿಸಲಾಗಿತ್ತು. ಇದೇ ಮೊದಲ ಬಾರಿಗೆ ಸಂಗಮದಲ್ಲಿ ಕಾವೇರಿ-ಕಪಿಲ ಸಂಗಮಾರತಿ ಮಾಡಲಾಯಿತು. ಪಟಾಕಿ ಸಿಡಿಸಿ ಭಕ್ತರು ಸಂಭ್ರಮಿಸಿದರು. ದೇವಸ್ಥಾನದ ಸುತ್ತಮುತ್ತ ವಿವಿಧ ಬಗೆಯ ದೀಪಾಲಂಕಾರ ಜಗಮಗಿಸಿತು.
ನಂಜುಂಡೇಶ್ವರ ದರ್ಶನಕ್ಕೆ ನೂಕುನುಗ್ಗಲು: ಕಾರ್ತಿಕ ಸೋಮವಾರದ ಪ್ರಯುಕ್ತ ನಂಜನಗೂಡಿನ ನಂಜುಂಡೇಶ್ವರನ ದರ್ಶನ ಪಡೆಯಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ನಿನ್ನೆ ಎರಡನೇ ಕಾರ್ತಿಕ ಸೋಮವಾರವಾಗಿದ್ದು ಬೆಳಗ್ಗೆಯಿಂದಲೇ ಜನಸಾಗರ ಹರಿದು ಬಂದಿತ್ತು. ಹೀಗಾಗಿ, ನೂಕುನುಗ್ಗಲು ಕಂಡುಬಂತು.
ಸ್ಥಳೀಯರಲ್ಲದೇ, ರಾಜ್ಯದ ಮೂಲೆಮೂಲೆಗಳಿಂದ ಹಾಗೂ ವಿದೇಶಿಯರು ಕೂಡ ದರ್ಶನ ಪಡೆದಿದ್ದು ವಿಶೇಷವಾಗಿತ್ತು. ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಭಕ್ತರಿಗೆ ದೇವಸ್ಥಾನದ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಸಂಜೆ ವೇಳೆಯಲ್ಲಿ ಭಕ್ತರು ದೇವಸ್ಥಾನ ಮುಂಭಾಗದಲ್ಲಿ ದೀಪ ಹಚ್ಚಿ ಕಾರ್ತಿಕ ಸೋಮವಾರ ಭಕ್ತಿಯಿಂದ ಆಚರಿಸಿದರು.
ಇದನ್ನೂ ಓದಿ: ದೀಪಾವಳಿಯ ಭವ್ಯ ದೀಪೋತ್ಸವ: 40 ಕ್ವಿಂಟಲ್ ಶುದ್ಧ ತುಪ್ಪ ಬಳಸಿ 6 ಲಕ್ಷ ದೀಪ ಬೆಳಗಿಸಿ ದಾಖಲೆ