ಮೈಸೂರು: ನಗರದ ಕೃಷ್ಣರಾಜ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಆದರೆ, ಈ ಬಾರಿ ಹಾಲಿ ಶಾಸಕರಿಗೆ ಟಿಕೆಟ್ ಬೇಡ ಎಂಬ ಕೂಗು ಎದ್ದಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಮತ್ತೊಂದೆಡೆ, ನಾನೇ ಅಭ್ಯರ್ಥಿ ಎಂಬ ವಿಶ್ವಾಸದಲ್ಲಿ ಹಾಲಿ ಶಾಸಕ ಎಸ್ ಎ ರಾಮದಾಸ್ ಇದ್ದಾರೆ. ಕಾಂಗ್ರೆಸ್ನಿಂದ ಕೂಡ ಅಭ್ಯರ್ಥಿ ಘೋಷಣೆ ಆಗಿಲ್ಲ. ಈ ಬಾರಿ ಜೆಡಿಎಸ್ ಕೂಡ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ.
ಜಿಲ್ಲೆಯ ಅತ್ಯಂತ ಪುಟ್ಟ ಹಾಗೂ ವಿಭಿನ್ನ ಕ್ಷೇತ್ರ ಎಂದರೆ ಕೃಷ್ಣರಾಜ. ಅಲ್ಲದೇ, ರಾಜ್ಯದಲ್ಲಿ ಬ್ರಾಹ್ಮಣ ಸಮುದಾಯ ಹೆಚ್ಚು ಪ್ರತಿನಿಧಿಸುವ ಕ್ಷೇತ್ರದಲ್ಲಿ ಇದು ಒಂದು. ಇದುವವರೆಗೆ ನಾಲ್ಕು ಬಾರಿ ಗೆಲುವು ಸಾಧಿಸಿರುವ ರಾಮದಾಸ್ ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಸಂಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್ನ ಮಾಜಿ ಶಾಸಕ ಎಂಕೆ ಸೋಮಶೇಖರ್ ಕೂಡ ನಿತ್ಯ ಮನೆ-ಮನೆಗೆ ಭೇಟಿ ನೀಡುತ್ತಿದ್ದಾರೆ. ಜೆಡಿಎಸ್ ಮುಖಂಡ ಕೆ.ವಿ. ಮಲ್ಲೇಶ್ ಕೂಡ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ಇದುವರೆಗೆ ಉಪ ಚುನಾವಣೆ ಸೇರಿ ಕ್ಷೇತ್ರದಲ್ಲಿ 13ಕ್ಕೂ ಹೆಚ್ಚು ಬಾರಿ ಚುನಾವಣೆಗಳು ನಡೆದಿವೆ. ಪಕ್ಷದ ಚಿಹ್ನೆ ಜೊತೆಗೆ ಬಹುತೇಕ ವ್ಯಕ್ತಿ ಆಧಾರಿತವಾಗಿಯೇ ಚುನಾವಣಾ ಫಲಿತಾಂಶಗಳು ಬಂದಿದೆ. ಕ್ಷೇತ್ರದಲ್ಲಿ ಒಟ್ಟಾರೆ 2,47,082 ಮತದಾರರು ಇದ್ದಾರೆ. ಇದರಲ್ಲಿ 1,22,290 ಮಹಿಳೆಯರು ಮತ್ತು 1,24,768 ಪುರುಷರು ಹಾಗೂ 24 ಇತರ ಮತದಾರರು ಸೇರಿದ್ದಾರೆ. ಬ್ರಾಹ್ಮಣರು, ಕುರುಬರು ಹಾಗೂ ಲಿಂಗಾಯತರ ಮತಗಳೇ ನಿರ್ಣಾಯಕವಾಗಿವೆ. ಈ ಬಾರಿಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಜೊತೆಗೆ ಬಿಎಸ್‌ಪಿ ಹಾಗೂ ಕರ್ನಾಟಕ ಪ್ರಜಾಕೀಯ ಪಾರ್ಟಿಯಿಂದಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತಯಾರಿ ನಡೆದಿದೆ.
ಟಿಕೆಟ್ ಆಕಾಂಕ್ಷಿತರು: ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ರಾಮದಾಸ್ ಸೇರಿದಂತೆ ಹಲವರು ಟಿಕೆಟ್ ಆಕಾಂಕ್ಷಿತರಿದ್ದಾರೆ. ಇವರೊಂದಿಗೆ ಹೆಚ್.ವಿ. ರಾಜೀವ್ ಅವರ ಹಸರು ಕೂಡ ಕೇಳಿ ಬರುತ್ತಿದೆ. ಆದರೆ, ಚತುರ ಎನಿಸಿಕೊಂಡಿರುವ ರಾಮದಾಸ್ ಅವರಿಗೇ ಈ ಬಾರಿ ಕೂಡ ಬಿಜೆಪಿ ಟಿಕೆಟ್ ಸಿಗುವ ನಿರೀಕ್ಷೆ ಹೆಚ್ಚಿದೆ ಎನ್ನುತ್ತಾರೆ ರಾಜಕೀಯ ಚಿಂತಕರು.
ಕಾಂಗ್ರೆಸ್ನಲ್ಲಿ ಟಿಕೆಟ್ಗಾಗಿ ಪೈಪೋಟಿ: ಕೃಷ್ಣರಾಜ ಕ್ಷೇತ್ರದ ಟಿಕೆಟ್ಗಾಗಿ ಕಾಂಗ್ರೆಸ್ನಲ್ಲೂ ಪೈಪೋಟಿ ಏರ್ಪಟ್ಟಿದೆ. 2013ರಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ನ ಎಂಕೆ ಸೋಮಶೇಖರ್ ಈ ಬಾರಿ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇದರ ನಡುವೆ ಹೊಸ ಮುಖಗಳತ್ತಲೂ ಪಕ್ಷ ಹುಡುಕಾಟ ನಡೆಸಲಾರಂಭಿಸಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅರವಿಂದ್ ನಗರದ ಪಾಲಿಕೆ ಮಾಜಿ ಸದಸ್ಯ ಪ್ರದೀಪ್ ಕುಮಾರ್ ಬ್ರಾಹ್ಮಣ ಕೋಟಾದಡಿಯಲ್ಲಿ ತಮಗೆ ಟಿಕೆಟ್ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಆದರೆ, ಅಂತಿಮವಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕೃಪೆ ಇದ್ದವರಿಗೆ ಟಿಕೆಟ್ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮತ್ತೊಂದೆಡೆ, ಜೆಡಿಎಸ್ನಲ್ಲೂ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಮಾಜಿ ಉಪ ಮಹಾಪೌರ ವಿ.ಶೈಲೇಂದ್ರ ಮತ್ತು ಕೆವಿ ಮಲ್ಲೇಶ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ನಲ್ಲಿ ಒಳ ಜಗಳ ಹಾಗೂ ಬ್ರಾಹ್ಮಣ ಸಮುದಾಯದ ಮೀಸಲಾತಿ ಹೆಚ್ಚಿಸುವಲ್ಲಿ ಮೈತ್ರಿ ಸರ್ಕಾರದಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರ ಕೊಡುಗೆಯು ಕ್ಷೇತ್ರದಲ್ಲಿ ಈ ಬಾರಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯನ್ನು ಆಕಾಂಕ್ಷಿಗಳು ಹೊಂದಿದ್ದಾರೆ. ಹೀಗಾಗಿ ಜೆಡಿಎಸ್ ಟಿಕೆಟ್ಗೂ ಪೈಪೋಟಿ ಉಂಟಾಗಿದೆ.
ಕ್ಷೇತ್ರದಲ್ಲಿ ಈವರೆಗೆ ಗೆದ್ದವರು..
- 1967: ಸಾಹುಕಾರ್ ಚೆನ್ನಯ್ಯ (ಪಕ್ಷೇತರ)
- 1972: ಡಿ.ಸೂರ್ಯನಾರಾಯಣ (ಕಾಂಗ್ರೆಸ್)
- 1974: ವೆಂಕಟಲಿಂಗಯ್ಯ (ಕಾಂಗ್ರೆಸ್)
- 1978: ಎಚ್.ಗಂಗಾಧರ್ (ಜನತಾ ಪಕ್ಷ)
- 1983: ಹೆಚ್.ಗಂಗಾಧರ (ಬಿಜೆಪಿ)
- 1985: ವೇದಾಂತ ಹೆಮಿಗೆ (ಜನತಾ ಪಕ್ಷ)
- 1989: ಕೆ.ಎನ್.ಸೋಮಸುಂದರಂ (ಕಾಂಗ್ರೆಸ್)
- 1994: ಎ.ರಾಮದಾಸ್ (ಬಿಜೆಪಿ)
- 1999: ಎ.ರಾಮದಾಸ್ (ಬಿಜೆಪಿ)
- 2004: ಎಂ.ಕೆ.ಸೋಮಶೇಖರ್ (ಜೆಡಿಎಸ್)
- 2008: ಎಸ್.ಎ.ರಾಮದಾಸ್ (ಬಿಜೆಪಿ)
- 2013: ಎಂ.ಕೆ ಸೋಮಶೇಖರ್ (ಕಾಂಗ್ರೆಸ್)
- 2018: ಎಸ್.ಎ.ರಾಮದಾಸ್ (ಬಿಜೆಪಿ)