ಮೈಸೂರು : ಗ್ರಾಮೀಣ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ಅವರು ತಿಳಿಸಿದರು. ಈ ಕುರಿತು ನಗರದಲ್ಲಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗಿ ಅಂತರ್ಜಲ ಕುಸಿಯುತ್ತಿದೆ.
ಈ ನಿಟ್ಟಿನಲ್ಲಿ ಕೇಂದ್ರದ ಜನಪರ ಶಕ್ತಿ ಯೋಜನೆಯಡಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳಿಗೆ ಪೂರಕವಾಗಿ ರಾಜ್ಯದ 4.638 ಹೆಚ್ಚು ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು, 608 ಕಲ್ಯಾಣಿ ಮತ್ತು ಪುಷ್ಕರಣಿಗಳಿಗೆ ಪುನರ್ಜೀವ ನೀಡಲಾಗಿದೆ. ಅಂದಾಜು 300 ಹೊಸ ಕೆರೆಗಳನ್ನು ನಿರ್ಮಿಸಲು ಸಹ ಕ್ರಮವಹಿಸಲಾಗಿದೆ ಎಂದು ಹೇಳಿದರು.
ಈಗಾಗಲೇ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿದ್ದ ಕೆರೆಗಳನ್ನು ತಾಲೂಕು ಪಂಚಾಯತ್‌ಗೆ ವರ್ಗಾಯಿಸಲಾಗುತ್ತಿದೆ. ರಾಜ್ಯದಲ್ಲಿ ಕೆಲವು ಕೆರೆಗಳು ಒತ್ತುವರಿ ಮಾಡಿಕೊಂಡಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಒತ್ತುವರಿ ಮಾಡಿಕೊಂಡಿರುವವರು ತಕ್ಷಣವೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿ 98.ಲಕ್ಷ ಮನೆಗಳಿವೆ. ಮನೆಮನೆಗೆ ಜಲ ಜೀವ ಯೋಜನೆ ಮುಖಾಂತರ, ನಲ್ಲಿಗಳ ಮುಖಾಂತರ ನೀರು ಒದಗಿಸಲಾಗುವುದು. ಈಗಾಗಲೇ 1ಲಕ್ಷಕ್ಕೂ ಹೆಚ್ಚು ಮನೆಗಳಿಗೆ ನಲ್ಲಿಗಳ ಮುಖಾಂತರ ನೀರು ಒದಗಿಸಲಾಗಿದೆ. ಈ 2 ವರ್ಷಗಳಲ್ಲಿ ಪ್ರತಿ ಮನೆ ಮನೆಗೂ ನೀರು ಪೂರೈಸಲಾಗುವುದು. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ನೀರಿಲ್ಲದ ಪ್ರದೇಶಗಳಲ್ಲಿ ನದಿಗಳಲ್ಲಿ ನೀರನ್ನು ಸಂಗ್ರಹಿಸಿ ಅವಶ್ಯಕತೆಯಿರುವ ಪ್ರದೇಶಗಳಿಗೆ ಸೇವೆ ಒದಗಿಸಲಾಗುವುದು ಎಂದರು.