ಮೈಸೂರು: ಮೂವರು ಬಾಲಾಪರಾಧಿಗಳು ಹೊರಗಿನವರ ಸಹಾಯ ಪಡೆದು ನಗರದ ಬಾಲಮಂದಿರದಿಂದ ಪರಾರಿಯಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ವಿವೇಕಾನಂದ ನಗರದ ಮುಖ್ಯರಸ್ತೆಯಲ್ಲಿರುವ ಬಾಲಮಂದಿರದಲ್ಲಿ ಈ ಮೂವರು ಬಾಲಾಪರಾಧಿಗಳು ಇದ್ದರು. ಇವರನ್ನು ಹೊರಗೆ ಕರೆದುಕೊಂಡು ಹೋಗುವ ಉದ್ದೇಶದಿಂದ ವೀಕ್ಷಣಾಲಯಕ್ಕೆ ಬಂದ ನಾಲ್ವರು ಆಗಂತುಕರು ಕೆಳ ಅಂತಸ್ತಿನ ಕಬ್ಬಿಣದ ಬಾಗಿಲಿನ ಬೀಗ ಒಡೆದು ಬಾಲ ಮಂದಿರದ ಒಳನುಗ್ಗಿದ್ದರು. ಅಲ್ಲದೆ ಅಲ್ಲೇ ಇದ್ದ ಬಾಲಮಂದಿರದ ಸಿಬ್ಬಂದಿಯನ್ನು ಕೂಡಿ ಹಾಕಿದ್ದಾರೆ. ಬಳಿಕ ಬಾಲಕರು ಇದ್ದ ಕೊಠಡಿಯ ಬಾಗಿಲು ಮುರಿದು, ಅಲ್ಲಿದ್ದವರಿಗೆ ಕೊಲೆ ಬೆದರಿಕೆ, ಬಾಲಾಪರಾಧಿಗಳನ್ನು ಕರೆದುಕೊಂಡು ಹೋಗಿದ್ದಾರೆ ಎಂದು ಬಾಲಕರ ವೀಕ್ಷಣಾಲಯದ ಪ್ರಭಾರ ಅಧೀಕ್ಷಕ ಗುರುಮೂರ್ತಿ ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಪ್ಪಿಸಿಕೊಂಡಿರುವ ಬಾಲಕರಿಗಾಗಿ ತಲಾಶ್ ನಡೆಸಿದ್ದಾರೆ.