ಮೈಸೂರು: ಜಂಬೂಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ಅರಮನೆಗೆ ಬಂದು ಎರಡು ತಿಂಗಳಿಂದ ವಿವಿಧ ಹಂತದ ತಾಲೀಮು ನಡೆಸಿದ್ದ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ತಂಡವು ಭಾನುವಾರ ಅಂತಿಮ ಹಂತದ ರಿಹರ್ಸಲ್ ಅನ್ನು ಯಶಸ್ವಿಯಾಗಿ ನಡೆಸಿತು.
ಕುಶಾಲತೋಪು ಸಿಡಿಸುವ ಮೂಲಕ ಜಂಬೂಸವಾರಿಯ ಪುಷ್ಪಾರ್ಚನೆ ತಾಲೀಮು ನಡೆಸಲಾಯಿತು. ಚಿನ್ನದ ಅಂಬಾರಿ ಹೊತ್ತು ಸಾಗುವ ಆನೆಯ ಸುತ್ತಲೂ ಸಾರ್ವಜನಿಕರ ಪ್ರವೇಶ ತಡೆಯಲು ವಿಶೇಷ ಪೊಲೀಸ್ ತುಕಡಿ ನಿಯೋಜಿಸಲಾಗುತ್ತಿದೆ. ಇದಲ್ಲದೇ, ಅರಮನೆಯಲ್ಲಿ ಭದ್ರತಾ ದೃಷ್ಟಿಯಿಂದ ಕಮಾಂಡೋ ಪಡೆ ತುಕಡಿಗಳನ್ನು ನೇಮಿಸಲಾಗಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಆನೆಗಳು, ಅಶ್ವಪಡೆ, ಶಸ್ತ್ರಸಜ್ಜಿತ ಪೊಲೀಸ್ ತುಕಡಿಗಳು ಸಹ ನಿನ್ನೆ ಅಂತಿಮ ಪೂರ್ವಾಭ್ಯಾಸ ನಡೆಸಿದವು.
ಅಭಿಮನ್ಯುವಿಗೆ ಅಂತಿಮ ತಾಲೀಮು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ನಾಳೆ ನಡೆಯಲಿದ್ದು, ಕ್ಯಾಪ್ಟನ್ ಅಭಿಮನ್ಯು ಮರದ ಅಂಬಾರಿ ಹೊರುವ ಮೂಲಕ ಭಾನುವಾರ ಅಂತಿಮ ತಾಲೀಮು ಮುಗಿಸಿದೆ. ಭಾನುವಾರ ಸಂಜೆ ಅಭಿಮನ್ಯು ನೇತೃತ್ವದಲ್ಲಿ ಅರಮನೆ ಆವರಣದಿಂದ ಹೊರಟ ಅರ್ಜುನ, ಭೀಮ, ರೋಹಿತ್, ಕಂಜನ್, ಗೋಪಿ, ಹಿರಣ್ಯ, ಲಕ್ಷ್ಮಿ, ವರಲಕ್ಷ್ಮಿ, ಮಹೇಂದ್ರ, ಸುಗ್ರೀವಾ, ಧನಂಜಯ, ಪ್ರಶಾಂತ ಆನೆಗಳು ಬನ್ನಿಮಂಟಪದವರೆಗೆ ತಾಲೀಮು ನಡೆಸಿ ವಾಪಸ್ ಬಂದವು.
ಸೆ.1 ರಂದು ನಡೆದ ಗಜಪಯಣದಲ್ಲಿ ಅಭಿಮನ್ಯು, ಭೀಮಾ, ಗೋಪಿ, ಧನಂಜಯ, ವರಲಕ್ಷ್ಮಿ, ವಿಜಯಾ, ಮಹೇಂದ್ರ, ಕಂಜನ್, ಅರ್ಜುನ ಆನೆಗಳ ಹೆಸರು ಇತ್ತು. ಆದರೆ, ಹುಲಿ ಕಾರ್ಯಾಚರಣೆಗೆ ತೆರಳಿದ ಅರ್ಜುನ ನಾಲ್ಕು ದಿನಗಳ ನಂತರ ಅರಮನೆ ಸೇರಿಕೊಂಡ. ಇದಾದ ಬಳಿಕ 2ನೇ ಗಜಪಡೆ ತಂಡದಲ್ಲಿ ರೋಹಿತ್, ಪ್ರಶಾಂತ, ಹಿರಣ್ಯ, ಲಕ್ಷ್ಮಿ, ಸುಗ್ರೀವಾ ಆನೆಗಳು ಅರಮನೆ ಆಗಮಿಸಿದ್ದವು. ಎಲ್ಲ ಆನೆಗಳು ಪ್ರತಿನಿತ್ಯ ಭರ್ಜರಿಯಾಗಿ ತಾಲೀಮು ನಡೆಸಿವೆ.
ಅ.23 ರಿಂದ ಮೂರು ದಿನ ಸಿಎಂ ಮೈಸೂರು ಪ್ರವಾಸ: ಜಂಬೂಸವಾರಿ ಹಾಗೂ ಪಂಜಿನ ಕವಾಯತು ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ದಿನ ಮೈಸೂರು ಪ್ರವಾಸ ಕೈಗೊಂಡಿದ್ದಾರೆ.
ಅ.23 ರಂದು ರಸ್ತೆ ಮೂಲಕ ಸಂಜೆ 4ಕ್ಕೆ ಮೈಸೂರಿಗೆ ಆಗಮಿಸಿ, ಜಿಲ್ಲಾಡಳಿತ ಮತ್ತು ಭಾರತೀಯ ವಾಯುಪಡೆ (ಸೂರ್ಯಕಿರಣ್ ಏರೋನ್ಯಾಟಿಕ್ ತಂಡ) ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯಿತು ಮೈದಾನದಲ್ಲಿ ನಡೆಯುವ ವೈಮಾನಿಕ ಪ್ರದರ್ಶನವನ್ನು ವೀಕ್ಷಿಸುವರು. ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಅ. 24ರಂದು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಬೆಳಗ್ಗೆ 8ಕ್ಕೆ ಭೇಟಿ ನೀಡುವರು. ಅರಮನೆ ಆವರಣದಲ್ಲಿರುವ ಬಲರಾಮ ದ್ವಾರದಲ್ಲಿ ಮಧ್ಯಾಹ್ನ 1.46ಕ್ಕೆ ನಂದಿಧ್ವಜ ಪೂಜೆ ನೆರವೇರಿಸುವರು. ಅರಮನೆ ಆವರಣದಲ್ಲಿ ಸಂಜೆ 4.40ಕ್ಕೆ ವಿಜಯದಶಮಿ ಮೆರವಣಿಗೆ ಉದ್ಘಾಟನೆ ಮಾಡುವರು. ರಾತ್ರಿ 7.30ಕ್ಕೆ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ನಡೆಯಲಿರುವ ಪಂಜಿನ ಕವಾಯತು (ಟಾರ್ಚ್ ಲೈಟ್ ಪೆರೇಡ್)ನಲ್ಲಿ ಭಾಗವಹಿಸುವರು.
ಇದನ್ನೂ ಓದಿ : ದಸರಾ ಗೋಲ್ಡ್ ಕಾರ್ಡ್, ಟಿಕೆಟ್ಗೆ ಬೇಡಿಕೆ : ಪಾಸ್ ಖರೀದಿಗೆ ಮತ್ತೆ ಅವಕಾಶ ನೀಡಿದ ಜಿಲ್ಲಾಡಳಿತ
ಅ.25 ರಂದು ಮಧ್ಯಾಹ್ನ 12.30ಕ್ಕೆ ರಾಮಕೃಷ್ಣನಗರದಲ್ಲಿರುವ ಲಿಂಗಾಂಬುಧಿ ಸಸ್ಯಶಾಸ್ತ್ರೀಯ ತೋಟವನ್ನು ಉದ್ಘಾಟನೆ ಮಾಡುವರು. ಮಧ್ಯಾಹ್ನ 1.30ಕ್ಕೆ ಕರ್ಜನ್‌ಪಾರ್ಕ್ ಆವರಣದಲ್ಲಿ ತೋಟಗಾರಿಕೆ ಪಿತಾಮಹ ಡಾ. ಎಂ.ಹೆಚ್.ಮರಿಗೌಡರ ಪ್ರತಿಮೆ ಅನಾವರಣಗೊಳಿಸುವರು. ನಂತರ ಶ್ರೀ ವರಸಿದ್ದಿ ವಿನಾಯಕ ಹೆಲ್ತ್ ಕೇರ್‌ನ ಆರ್ಯ ಆಸ್ಪತ್ರೆ ಉದ್ಘಾಟನೆ ಮಾಡುವರು. ಸಂಜೆ 4ಕ್ಕೆ ಮೈಸೂರು ವಿಮಾನ ನಿಲ್ದಾಣದಿಂದ ಹೊರಟು, 4.30ಕ್ಕೆ ಬೆಂಗಳೂರಿನ ಹೆಚ್ಎಎಲ್ ವಿಮಾನ ನಿಲ್ದಾಣ ತಲುಪಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.